ಕೊಳ್ಳೇಗಾಲ : ಪಟ್ಟಣದ ಜವಳಿ ಅಂಗಡಿಯೊಂದು ಲಾಕ್‌ಡೌನ್ ನಿಯಮ ಉಲಂಘಿಸಿ ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿದ್ದ ಪ್ರಕರಣ ಪೊಲೀಸರ ದಾಳಿಯಲ್ಲಿ ಬೆಳಕಿಗೆ ಬಂದಿದೆ. ಮಾಲೀಕನ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಎಪಿಎಸ್ ಪ್ಯಾರಡೈಸ್ ಬಟ್ಟೆ ಅಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಕದ್ದುಮುಚ್ಚಿ ವ್ಯಾಪಾರ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಸಬ್ ಇನ್ಸ್‌ಪೆಕ್ಟರ್ ತಾಜುವುದ್ದೀನ್ ತಂಡ ದಾಳಿ ನಡೆಸಿತು.
ಗುಟ್ಟಾಗಿ ಅಂಗಡಿಯೊಳಗೆ ಕೆಲಸಗಾರರನ್ನು ಕರೆಯಿಸಿ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಂಗಡಿ ಮಾಲೀಕನ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪತ್ಯೇಕ 8 ಪ್ರಕರಣ ದಾಖಲು : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಲಾಕ್‌ಡೌನ್ ನಿಯಮ ಉಲಂಘಿಸಿ ವ್ಯಾಪಾರ ಮಾಡುತ್ತಿದ್ದ ಚಿಕನ್ ಮತ್ತು ಮಟನ್ ಸೆಂಟರ್, ಸ್ಟೇಷನರಿಸ್, ಚಿಲ್ಲರೆ ಅಂಗಡಿ ಹಾಗೂ ಕುಂಕುಮ ಅಂಗಡಿ ಸೇರಿ ಒಟ್ಟು 7 ಅಂಗಡಿಗಳ ಮೇಲೆ ಪಟ್ಟಣ ಪೊಲೀಸರು ಜೂನ್ 7ರಂದು ಪ್ರಕರಣ ದಾಖಸಿದ್ದಾರೆ. ಅಕ್ರಮ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಅಗರ ನಿವಾಸಿ ಹರೀಶ್ ಎಂಬಾತನನ್ನ ಬಂಧಿಸಿದ್ದಾರೆ.
ಲಾಕ್‌ಡೌನ್ ನಿಯಮದಂತೆ ನಿಗದಿತ ಸಮಯದಲ್ಲಿ ಅಗತ್ಯ ಸೇವೆಗಳ ವ್ಯಾಪಾರಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. ಆದರೂ, ಕದ್ದು ಮುಚ್ಚಿ ಅಂಗಡಿ-ಮುಂಗಟ್ಟುಗಳನ್ನು ತೆಗೆದು ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸುತ್ತಿದ್ದಾರೆ.