ಚಾಮರಾಜನಗರ : ಕೇರಳದಿಂದ ತಂದು ಗುಂಡ್ಲುಪೇಟೆಗೆ ತ್ಯಾಜ್ಯ ಸುರಿಯುವ ಘಟನೆ ಆಗಾಗ್ಗೆ ನಡೆಯುತ್ತಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಸಚಿವ ನಾರಾಯಣಗೌಡ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ರಮೇಶ್ಗೆ ಕ್ಲಾಸ್ ತೆಗೆದುಕೊಂಡರು.
ಬಾಡಿಗೆ ಕೊಟ್ಟು ಖಾಸಗಿ ಜಮೀನುಗಳಲ್ಲಿ ಕಸ ಸುರಿಯುತ್ತಿರುವವರಿಗೆ ನೋಟಿಸ್ ನೀಡಿದ್ದೇವೆ ಎಂದು ಅಧಿಕಾರಿ ಉತ್ತರಿಸಿದ್ದಕ್ಕೆ ಗರಂ ಆದ ಸಚಿವರು, ಕೇವಲ ನೋಟಿಸ್ ಕೊಟ್ಟರಷ್ಟೇ ಸಾಕೇ?. ಇವತ್ತು ಕಸ ಹಾಕ್ತಾರೆ, ನಾಳೆ ಆ್ಯಸಿಡ್ ತರುತ್ತಾರೆ, ಇಲ್ಲ ಬಾಂಬ್ ತಂದು ಬಿಸಾಡ್ತಾರೆ. ಅಧಿಕಾರಿಗಳು ಇಷ್ಟೊಂದು ಅಸಡ್ಡೆ ತೋರುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡರು.
24 ತಾಸಿನೊಳಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಚೆಕ್ ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಡಿಸಿಗೆ ಸೂಚಿಸಿದರು. ನಗರಸಭೆಯು ಉತ್ತಮವಾಗಿ ಕಾರ್ಯನಿರ್ವಹಿಸಲಿ. ಸಂಪೂರ್ಣ ಸಹಕಾರ ನೀಡುತ್ತೇನೆ. ಜೊತೆಗೆ, ಕಾಮಗಾರಿಗಳು ಶೀಘ್ರ ಮುಗಿಯಲಿ. ಅಗತ್ಯ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.