ಒಂದೆಡೆ ಸರ್ಕಾರ ಕೊರೊನಾ ತಡೆಯಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಒಂದಲ್ಲಾ ಒಂದು ರೀತಿ ಜಾಗೃತಿ ಮೂಡಿಸುತ್ತಿದೆ. ಆದರೆ, ರಾಜ್ಯದ ಜನತೆ ಯಾವುದೇ ಅಂಜಿಕೆ ಕಡಿಮೆಯಾಗದಿರುವುದು ವಿಪರ್ಯಾಸವೇ ಸರಿ. ಕರ್ನಾಟಕ ಲಾಕ್ಡೌನ್ ಆದೇಶದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನ ಗುಂಪು, ಗುಂಪಾಗಿ ಮಾರುಕಟ್ಟೆ, ಅಂಗಡಿಗಳತ್ತ ಧಾವಿಸಿದ್ದಾರೆ.
ಪ್ರಧಾನಿ ಮೋದಿ ಕರೆಕೊಟಿದ್ದ ಜನತಾ ಕರ್ಫ್ಯೂಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ದೊರಕಿತು. ಕರ್ಫ್ಯೂ ಮಾದರಿಯಲ್ಲೇ ರಾಜ್ಯ ಸರ್ಕಾರವು ಕೊರೊನಾವನ್ನು ಸಂಪೂರ್ಣ ನಿಶಕ್ತಿಗೊಳಿಸಲು ಇಡೀ ರಾಜ್ಯವನ್ನೇ ಲಾಕ್ಡೌನ್ (ದಿಗ್ಭಂಧನ) ಮಾಡಿ ರಾತ್ರಿ 10 ಗಂಟೆಗೆ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು 9 ಜಿಲ್ಲೆಗಳನ್ನು ಲಾಕ್ಡೌನ್ ಮಾಡಿ ಆದೇಶಿಸಲಾಗಿತ್ತು.
ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮತ್ತು ದಿನಬಳಕೆ ವಸ್ತುಗಳ ಖರೀದಿಸಲು ಕೊಳ್ಳೇಗಾಲ, ಕೊಪ್ಪಳ, ಚಳ್ಳಕೆರೆ, ಸುರತ್ಕಲ್, ಗದಗ, ಸುರಪುರ, ಹುಬ್ಬಳ್ಳಿ, ಯಾದಗಿರಿ, ಹಾವೇರಿ, ದೊಡ್ಡಬಳ್ಳಾಪುರ ಜನತೆ ಹೇಗೆಲ್ಲಾ ಮಾರುಕಟ್ಟೆ, ದಿನಸಿ ಅಂಗಡಿಗಳತ್ತ ಧಾವಿಸಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ನೀವೆಲ್ಲ ನೋಡಬಹುದಾಗಿದೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಾರ್, ರೆಸ್ಟೋರೆಂಟ್, ಜಾತ್ರೆ, ಪ್ರಾರ್ಥನೆ, ಚಿತ್ರಮಂದಿರಗಳು, ರೆಸಾರ್ಟ್ ಸೇರಿದಂತೆ ಎಲ್ಲವನ್ನೂ ಸಂಪೂರ್ಣ ಬಂದ್ ಮಾಡಲು ಕರೆ ನೀಡಲಾಗಿದೆ. ಆದರೆ, ಜನರ ಹಿತ ದೃಷ್ಟಿಯಿಂದ ಜನತೆಗೆ ದಿನ ನಿತ್ಯದ ಬಳಕೆಗೆ ಬೇಕಾದ ರೇಷನ್, ಹಾಲು, ತರಕಾರಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೂ ಇದನ್ನು ತಿಳಿಯದ ಜನಸಾಮಾನ್ಯರು ರೇಷನ್, ತರಕಾರಿ ಖರೀದಿಸಲು ಮುಗಿ ಬಿದ್ದಿದ್ದರು.