ಚಾಮರಾಜನಗರ: ಬಿಜೆಪಿಯ ಪ್ರಭಾವಿ ಮುಖಂಡ, ಲಿಂಗಾಯತ ಸಮುದಾಯದ ನಾಯಕ ವಿ.ಸೋಮಣ್ಣ ಅವರನ್ನು ಸೋಲಿಸಿ ಚಾಮರಾಜನಗರದಲ್ಲಿ ಸತತ 4ನೇ ಬಾರಿ ಶಾಸಕರಾಗಿರುವ ಸಿ.ಪುಟ್ಟರಂಗಶೆಟ್ಟಿಗೆ ಮಂತ್ರಿ ಪಟ್ಟ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮೂರರಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಚಾಮರಾಜನಗರದ ಮೂವರು ಕಾಂಗ್ರೆಸ್ ಶಾಸಕರಲ್ಲಿ 68 ರ ಹರೆಯದ ಪುಟ್ಟರಂಗಶೆಟ್ಟಿ ಹಿರಿಯರು. ಹಾಗೆಯೇ, ಉಪ್ಪಾರ ಜಾತಿಯ ರಾಜ್ಯದ ಏಕೈಕ ಶಾಸಕ ಎಂಬ ಹೆಗ್ಗಳಿಕೆಯೂ ಇವರದ್ದಾಗಿದ್ದು, ಸಿದ್ದು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದು ಕಟ್ಟಾ ಬೆಂಬಲಿಗ - 4 ಬಾರಿ ಶಾಸಕ: ಸಿ.ಪುಟ್ಟರಂಗಶೆಟ್ಟಿಯವರು ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ "ಈಗಲೂ ನನಗೆ ಸಿದ್ದರಾಮಯ್ಯನೇ ಸಿಎಂ" ಎಂದು ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದರು. ಹಾಗೆಯೇ, ಕ್ಷೇತ್ರ ಹುಡುಕಾಟದ ವೇಳೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ ಎಂದು ಆಹ್ವಾನ ಕೊಟ್ಟಿದ್ದರು.
ಇದನ್ನೂ ಓದಿ : ಡಿಸಿಎಂ ಹುದ್ದೆ ಮೇಲೆ ಕಣ್ಣು : ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಸಿದ್ದು ಆಪ್ತ ಬಳಗದ ಶಾಸಕರಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಿದ್ದರಾಮಯ್ಯ ಮಣೆ ಹಾಕುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಚಾಮರಾಜನಗರಕ್ಕೆ ಪ್ರಾತಿನಿಧ್ಯ ಕೊಡಬೇಕಾಗಿರುವ ಜೊತೆಗೆ ಹಿಂದುಳಿದ ವರ್ಗ ಉಪ್ಪಾರ ಸಮುದಾಯಕ್ಕೂ ಆದ್ಯತೆ ನೀಡಬೇಕಿರುವುದರಿಂದ ಪುಟ್ಟರಂಗಶೆಟ್ಟಿಗೆ ಮಂತ್ರಿ ಭಾಗ್ಯ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ನಿವಾಸದ ಮುಂದೆ ಸಂಗೀತ ವಾದ್ಯ ; ಬೆಂಬಲಿಗರಿಗೆ ನಮಸ್ಕರಿಸಿದ ಡಿಕೆಶಿ - ವಿಡಿಯೋ
ಸೋಲಿಲ್ಲದ ಸರದಾರ : ಹಳೇ ಮೈಸೂರು ಭಾಗದಲ್ಲಿ ಚಾಮರಾಜನಗರ ಕಳೆದ 4 ಸಾಲಿನಿಂದ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಪುಟ್ಟರಂಗಶೆಟ್ಟಿ ಅವರು ಕ್ಷೇತ್ರದಲ್ಲಿ ನಿರಂತರವಾಗಿ ನಾಲ್ಕು ಬಾರಿ ಗೆದ್ದ ಮೊದಲ ಶಾಸಕರಾಗಿದ್ದು, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಹಾಗಾಗಿ, ಸಿದ್ದು ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗುವ ಉತ್ಸಾಹದಲ್ಲಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ, ವರುಣದಲ್ಲಿ ವಿ.ಸೋಮಣ್ಣಗೆ ಸೋಲು : 4ನೇ ಬಾರಿ ಗೆದ್ದ ಪುಟ್ಟರಂಗಶೆಟ್ಟಿ
ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳು: ಓರ್ವ ಪ್ರಬಲ ನಾಯಕ ಸ್ಪರ್ಧೆಗೂ ಬಗ್ಗದ ಪುಟ್ಟರಂಗಶೆಟ್ಟಿ, ಯಾವುದೇ ಹಾದಿಯನ್ನು ಸೋಮಣ್ಣಗೆ ಬಿಟ್ಟುಕೊಡದೇ ವಿಜಯಿಯಾದರು. ಚಾಮರಾಜನಗರದಲ್ಲಿ ಕಾಂಗ್ರೆಸ್ - ಸಿ. ಪುಟ್ಟರಂಗಶೆಟ್ಟಿ - 83,858 ಮತಗಳನ್ನು ಪಡೆದಿದ್ದು, ಬಿಜೆಪಿ - ವಿ. ಸೋಮಣ್ಣ - 76,325, ಜೆಡಿಎಸ್ - ಆಲೂರು ಮಲ್ಲು - 1082 ಮತಗಳು, ಬಿಎಸ್ಪಿ - ಸಾ. ರಾ ಮಹೇಶ್ - 6,461 ಮತಗಳನ್ನು ಪಡೆದಿದ್ದರು. ನೋಟಾ (ಯಾರಿಗೂ ಮತವಿಲ್ಲ) - 794 ಮತಗಳನ್ನು ಹಾಕಲಾಗಿತ್ತು.
ಇದನ್ನೂ ಓದಿ : 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ : ಡಿಕೆಶಿ