ಚಾಮರಾಜನಗರ: ಕೇರಳಕ್ಕೆ ನಾಳೆಯಿಂದ ಬಸ್ ಸಂಚಾರ ಆರಂಭವಾಗುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಚಾಮರಾಜೇಶ್ವರ ದೇಗುಲದ ಎದುರು ಚಾ.ರಂ.ಶ್ರೀನಿವಾಸ ಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇರಳದಲ್ಲಿ ಝಿಕಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ನಡುವೆಯೇ ಬಸ್ ಸಂಚಾರ ಆರಂಭಿಸುವುದು ಸರಿಯಲ್ಲ. ಆರ್ಟಿ-ಪಿಸಿಆರ್ ಟೆಸ್ಟ್ ವರದಿ ಆಧರಿಸಿ ಗಡಿಯನ್ನು ಮುಕ್ತ ಮಾಡುವುದು ವೈರಸ್ ಹರಡಲು ದಾರಿ ಮಾಡಿಕೊಟ್ಟಂತೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಗಡಿಯನ್ನು ಸಂಪೂರ್ಣ ಬಂದ್ ಮಾಡಬೇಕು. ಎರಡನೇ ಅಲೆಯಲ್ಲಿ ಜನರು ತತ್ತರಿಸಿ ಹೋಗಿದ್ದು ಈ ನಡುವೆ ಕೇರಳ ವೈರಸ್ ಹರಡುವ ಮುನ್ನ ಸರ್ಕಾರ ಮತ್ತೊಮ್ಮೆ ಯೋಚಿಸಬೇಕು. ತಜ್ಞರ ಸಲಹೆ ಪಡೆದು ಮುಂದುವರೆಯಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಕೇರಳ ರಾಜ್ಯದ ಕೋವಿಡ್ ಪ್ರಕರಣಗಳ ವರದಿ ಹೀಗಿದೆ:
ದೇಶಾದ್ಯಂತ ಕೊರೊನಾ ಎರಡನೇ ಅಲೆಯು ತಗ್ಗುತ್ತಿರುವ ಲಕ್ಷಣಗಳು ಹಲವು ರಾಜ್ಯಗಳಲ್ಲಿ ಗೋಚರವಾಗುತ್ತಿದ್ದರೂ, ಕೇರಳದಲ್ಲಿ ಮಾತ್ರ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಇಂದು 12,220 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 12,502 ಮಂದಿ ಗುಣಮುಖರಾಗಿದ್ದು, 97 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1,14,844 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 14,586 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ದೇಶದಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ 2020ರ ಜನವರಿಯಲ್ಲಿ ಕೇರಳದಲ್ಲಿಯೇ ವರದಿಯಾಗಿತ್ತು.