ಚಾಮರಾಜನಗರ : ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಜಿಲ್ಲೆಯ ಅರ್ಚಕರಿಗೆ ಕನ್ನಡ ಮಂತ್ರಗಳನ್ನು ಹೇಳಿಕೊಡುವ ಮೂಲಕ ಗಡಿಜಿಲ್ಲೆಯ ದೇಗುಲಗಳಲ್ಲಿ ಕನ್ನಡ ಮಂತ್ರಘೋಷಕ್ಕೆ ನಾಂದಿ ಹಾಡಿದ್ದಾರೆ.
ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಸಂಯುಕ್ತವಾಗಿ ನಗರದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಕನ್ನಡದಲ್ಲಿ ದೇವರ ಪೂಜೆ ವಿಧಿ-ವಿಧಾನ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಣ್ಣನ್ ಅವರು ಕರುನಾಡ ಭಾಷೆಯಲ್ಲೇ ದೇವರನ್ನು ಸ್ತುತಿಸುವ ಮಂತ್ರಗಳನ್ನು ಬೋಧಿಸಿದರು.
ಸಂಕಲ್ಪ, ಪ್ರಾರ್ಥನೆ, ಅವಾಹನೆ, ಪುಷ್ಪಾಕ್ಷತೆ, ಧೂಪ-ದೀಪ, ಸ್ತೋತ್ರ ಪಠನೆ, ನೈವೇದ್ಯ, ತಾಂಬೂಲ, ಮಂಗಳಾರತಿ, ಅರ್ಚನೆ ಮತ್ತು ರಾಷ್ಟಾಶೀರ್ವಾದ ಕನ್ನಡ ಮಂತ್ರಗಳನ್ನು ಅರ್ಚಕರಿಗೆ ಹೇಳಿಕೊಟ್ಟರು. ಜೊತೆಗೆ ಅರ್ಚಕರು ಹೇಗಿರಬೇಕು, ಯಾವ ರೀತಿ ವರ್ತಿಸಬೇಕು, ಭಕ್ತಾದಿಗಳನ್ನು ಹೇಗೆ ಕಾಣಬೇಕೆಂಬ ನೀತಿ ಪಾಠ ಮಾಡಿದರು.
ಕಳೆದ 8 ತಿಂಗಳುಗಳ ಹಿಂದೆ ಜಿಲ್ಲಾಡಳಿವು ಮುಜರಾಯಿ ಇಲಾಖೆಯ ದೇಗುಲಗಳಲ್ಲಿ ಕನ್ನಡ ಮಂತ್ರ ಪಠಣವಾಗಬೇಕೆಂದು ಆದೇಶಿತ್ತು. ಆದರೆ, ಸಂಸ್ಕೃತದಲ್ಲೇ ಮಂತ್ರಗಳನ್ನು ಕಲಿತು ದಿಢೀರನೆ ಕನ್ನಡ ಮಂತ್ರ ಹೇಳಲು ಕಷ್ಟಸಾಧ್ಯವಾಗುವುದರಿಂದ ತರಬೇತಿ ಕೊಡಿಸುವಂತೆ ಅರ್ಚಕ ಸಮುದಾಯ ಕೋರಿತ್ತು. ಅದರಂತೆ ಇಂದು ಕಾರ್ಯಾಗಾರ ನಡೆದಿದೆ. ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಮಂದಿ ಅರ್ಚಕರು ಭಾಗಿಯಾಗಿದ್ದರು.