ಚಾಮರಾಜನಗರ: ಹಣದಾಸೆಗೆ 25 ದಿನದ ಮಗು ಮಾರಾಟ ಮಾಡಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಶಿಶುವನ್ನು ಪೊಲೀಸರು 24 ತಾಸಿನೊಳಗೆ ಪತ್ತೆಹಚ್ಚಿದ್ದಾರೆ. 50 ಸಾವಿರ ರೂ.ಗೆ ಮಾರಾಟ ಮಾಡಿದ್ದ ಮಗುವಿನ ತಂದೆ ಬಸಪ್ಪ(35)ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ 7 ದಿನಗಳಿಂದ ಎದೆಹಾಲು ಕುಡಿಸದೇ ಪ್ಯಾಕೆಟ್ ಹಾಲು ಕುಡಿಸಿರುವುದರಿಂದ ಆರೋಗ್ಯದಲ್ಲಿ ಏರುಪಾರಾಗಿದೆ. ಸದ್ಯ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಮಗು ಮಾರಾಟ ಪ್ರಕರಣ: ಚಾಮರಾಜನಗರದ ಕೋರ್ಟ್ ರಸ್ತೆ ಬಡಾವಣೆಯಲ್ಲಿ ವಾಸವಿರುವ, ಹೋಟೆಲ್ ಕಾರ್ಮಿಕ ಬಸಪ್ಪ(35) ಹಾಗೂ ನಾಗವೇಣಿ ದಂಪತಿಗೆ 7 ವರ್ಷದ ಗಂಡು ಮಗು ಇದೆ. 25 ದಿನಗಳ ಹಿಂದಷ್ಟೇ ಎರಡನೇ ಹೆರಿಗೆಯಲ್ಲಿ ಮತ್ತೊಂದು ಗಂಡು ಮಗು ಜನಿಸಿತ್ತು. ಆ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನಿಗೆ 50 ಸಾವಿರ ರೂ.ಗೆ 7 ದಿನಗಳ ಹಿಂದೆ ಮಾರಾಟ ಮಾಡಿದ್ದರು. ಲಿಂಗತ್ವ ಅಲ್ಪಸಂಖ್ಯಾತೆ ಹಾಗೂ ಸಂಶೋಧನಾ ವಿದ್ಯಾರ್ಥಿಯಾಗಿರುವ ದೀಪು ಬುದ್ಧೆ ಮೂಲಕ ಮಗು ಮಾರಾಟ ಪ್ರಕರಣ ಬಯಲಿಗೆಳೆದು, ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತಂದಿದ್ದರು.
ಬಳಿಕ ಕಾರ್ಯಪ್ರವೃತ್ತರಾದ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಮದ್ದೂರು ತಾಲೂಕಿನ ಊರೊಂದರಲ್ಲಿದ್ದ ಮಗುವನ್ನು ಪತ್ತೆಹಚ್ಚಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಮಗು ಮಾರಾಟ ಮಾಡಿದ್ದ ಬಸಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಖರೀದಿಸಿದವರ ಬಂಧನ ಇಲ್ಲವೇ, ವಶಕ್ಕೆ ಪಡೆದಿರುವ ಸಂಬಂಧ ಪೊಲೀಸ್ ಇಲಾಖೆ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ಚಾಮರಾಜನಗರ: ದುಡ್ಡಿನಾಸೆಗೆ ಮಗು ಮಾರಿದ ತಂದೆ, ಕಂದನಿಗಾಗಿ ತಾಯಿ ಹಂಬಲ