ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಶನಿವಾರ 'ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ' ಕಾರ್ಯಕ್ರಮದಲ್ಲಿ ಡಿಸಿ ಡಾ. ಎಂ.ಆರ್. ರವಿ ಎರಡನೇ ವಾಸ್ತವ್ಯ ನಡೆಸಿ ಸಾಲುಸಾಲು ಸಮಸ್ಯೆ ಹೊತ್ತು ತಂದ ಜನರಿಗೆ ಪರಿಹಾರದ ಭರವಸೆ ನೀಡಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ, ವಿದ್ಯುತ್ ಸಂಪರ್ಕ, ಬೀದಿದೀಪ, ಸೊಸೈಟಿಗಳಿಂದ ಸಾಲ ವಿತರಣೆ, ವಿಕಲಚೇತನರ ಪಿಂಚಣಿ, ನೀರಿನ ಸಮಸ್ಯೆ, ರಸ್ತೆ, ಒಳಚರಂಡಿ, ನಿವೇಶನ, ಖಾತೆ ಬದಲಾವಣೆ, ಆರ್.ಟಿ.ಸಿ ತಿದ್ದುಪಡಿ, ಸಾಗುವಳಿ ಚೀಟಿ ವಿತರಣೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಹೊತ್ತು ತಂದ ಸ್ಥಳೀಯರಿಗೆ ಕೂಡಲೇ ಪರಿಹರಿಸುವ ಆಶ್ವಾಸನೆ ನೀಡಿದರು.
ವಿದ್ಯುತ್ ಸಂಪರ್ಕ ನೀಡಲು ಕಳೆದ ಆರು ತಿಂಗಳ ಹಿಂದೆ ಅರ್ಜಿ ಹಾಕಿದ್ದರೂ ಸಹ ಕ್ರಮ ವಹಿಸದ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಡಿಸಿ ಸೋಮವಾರವೇ ಸಮಸ್ಯೆ ಇತ್ಯರ್ಥ್ಯಪಡಿಸುವಂತೆ ತಾಕೀತು ಮಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸ್ಥಳೀಯ ಸೊಸೈಟಿಗಳು ಕಳೆದ ನಾಲ್ಕು ವರ್ಷಗಳಿಂದ ಸಾಲ ನೀಡದೇ ವಿವಿಧ ಸಬೂಬು ಹೇಳುತ್ತಿವೆ ಎಂಬ ಬಹುತೇಕರ ದೂರಿಗೆ ಎಲ್ಲಾ ದಾಖಲೆಗಳನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಸಾಲ ನೀಡದಿದ್ದರೇ ಗಂಭೀರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡೋಂಗ್ರಿ ಗೆರೆಶೀಯಾ ಜನಾಂಗದವರಿಗೆ ಒದಗಿಸಬೇಕಿರುವ ಭೂಮಿ ಸಂಬಂಧ ಕ್ರಮ ತೆಗೆದುಕೊಳ್ಳುವ ಜೊತೆಗೆ ಉಪಕಾರ ಕಾಲೋನಿ, ಕೊಡಸೋಗೆ ಮತ್ತಿತರೆಡೆ ಉಂಟಾಗಿರುವ ನೀರಿನ ತೊಂದರೆ ಪರಿಹರಿಸುವುದಾಗಿ ತಿಳಿಸಿದರು.
ಇದನ್ನು ಓದಿ:ಚಾಮರಾಜನಗರದಲ್ಲಿ ನಡೆಯುತ್ತಿಲ್ಲ ಕರ್ಕ್ಯೂಮಿನ್ ಪರೀಕ್ಷೆ.. ರೈತರ ಕೈ ಕೆಸರಾದ್ರೇ, ದಲ್ಲಾಳಿಗಳ ಬಾಯಿ ಮೊಸರು..