ಚಾಮರಾಜನಗರ: ತನ್ನ ಶಕ್ತಿ, ಚತುರಮತಿ, ಸೂಕ್ಷ್ಮ ಬೇಟೆಗಾರನ ಬಲವನ್ನು ತೋರಿಸಿರುವ ಬಂಡೀಪುರದ ಶ್ವಾನ ರಾಣಾನಂತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರರ ಸೊಕ್ಕಡಗಿಸಲು ಝಾನ್ಸಿ ಎಂಟ್ರಿ ಕೊಡುತ್ತಿದ್ದಾಳೆ.
ಬಂಡೀಪುರದಲ್ಲಿ ತನ್ನ ಪರಾಕ್ರಮ ಮೆರೆಯುತ್ತಿರುವ ರಾಣಾದಂತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಝಾನ್ಸಿ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನ ಕೆಲವೇ ತಿಂಗಳುಗಳಲ್ಲಿ ಎಂಟ್ರಿ ಕೊಡಲಿದೆ.
ಹರಿಯಾಣದ ಪಂಚಕುಲದಲ್ಲಿರುವ ಸ್ವಯಂ ಸೇವಾ ಸಂಸ್ಥೆ ಟ್ರಾಫಿಕ್ ಮತ್ತು ಡಬ್ಲೂಡಬ್ಲೂಎಫ್-ಇಂಡಿಯಾದಿಂದ ಇಂಡೋ ಟಿಬೆಟಿನ್ ಬಾರ್ಡರ್ ಪೊಲೀಸ್ ಫೋರ್ಸ್ (ಬಿಟಿಸಿ-ಐಟಿಬಿಪಿ) ಶಿಬಿರದಲ್ಲಿ "14 ಸ್ನಿಫರ್ ಡಾಗ್" ಮತ್ತು 28 ಮಂದಿ ಹ್ಯಾಂಡ್ಲರ್ಸ್‌ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಶಿಬಿರದಲ್ಲಿ 8 ತಿಂಗಳ ಝಾನ್ಸಿ ಹೆಸರಿನ ಜರ್ಮನ್ ಶಫರ್ಡ್ ಶ್ವಾನ ಮತ್ತು ಬಿಆರ್‌ಟಿ ಸಿಬ್ಬಂದಿಯಾದ ಬಸವರಾಜು, ಸಿದ್ದರಾಮಣ್ಣ ಎಂಬುವವರಿಗೂ ತರಬೇತಿ ಕೊಡಲಾಗುತ್ತಿದೆ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈವರೆಗೂ ಸ್ನಿಫರ್ ಡಾಗ್ ಒಂದೂ ಕೂಡ ಇರಲಿಲ್ಲ. ಇದೇ ಮೊದಲ ಬಾರಿಗೆ ಝಾನ್ಸಿ ಬಿಆರ್‌ಟಿಗೆ ಕಾಲಿಡುತ್ತಿದ್ದಾಳೆ. ಈ ಶ್ವಾನಗಳನ್ನು ಬಳಸಿಕೊಂಡು ಮರಗಳ್ಳತನ, ಕಳ್ಳಬೇಟೆಗಳಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳುವ ವಿಶ್ವಾಸ ಅರಣ್ಯಾಧಿಕಾರಿಗಳದಾಗಿದ್ದು, ಈ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ.
ಈಗಾಗಲೇ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಣಾ ಇದ್ದು, ಎರಡು ಮುಧೋಳ್ ತಳಿಯ ನಾಯಿಗಳನ್ನು ತರಬೇತಿಗೊಳಿಸುತ್ತಿದ್ದಾರೆ. ರಾಣಾ ನಿವೃತ್ತಿ ಅಂಚಿನಲ್ಲಿರುವುದರಿಂದ ಮತ್ತೊಂದು ಜರ್ಮನ್ ಶೆಫರ್ಡ್ ಶ್ವಾನ ಬರುವ ಸಾಧ್ಯತೆಯೂ ಇದೆ. ಕಳ್ಳಬೇಟೆಗಾರರು, ಹುಲಿ ಪತ್ತೆ ಕಾರ್ಯಾಚರಣೆ, ಇನ್ನಿತರ ಅರಣ್ಯ ಅಪರಾಧ ಪ್ರಕರಣ ಪತ್ತೆಗೆ ಝಾನ್ಸಿ ಅರಣ್ಯ ಇಲಾಖೆಗೆ ವರವಾಗಿ ಪರಿಣಮಿಸಲಿದೆ.