ಚಾಮರಾಜನಗರ: ಗ್ರಾಮೀಣ ಭಾಗದಲ್ಲಿ ಸರಗಳ್ಳರ ಹಾವಳಿ ಒಂದೆಡೆಯಾದರೇ ಜಾಣತನದಿಂದ ಹಾಡಹಗಲೇ ಚಿನ್ನಾಭರಣ ಎಗರಿಸುತ್ತಿರುವ ಪ್ರಕರಣಗಳು ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ.
ಹಾಡಹಗಲೇ ಮಾಯದ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು 52 ಗ್ರಾಂ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ ಇಬ್ಬರು ಕಳ್ಳರು, ಸಿದ್ದಯ್ಯನಪುರ ಗ್ರಾಮದ ಮಹಾದೇವಿ ಎಂಬವರನ್ನು ಬಣ್ಣದ ಮಾತುಗಳಿಂದ ಮರಳು ಮಾಡಿ ಪಾಲಿಶ್ ಹಾಕಿಕೊಡುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದಾರೆ.
ಪಾಲಿಶ್ ಬಳಿಕ ಚಿನ್ನಾಭರಣಗಳು ಹೊಳೆಯುತ್ತವೆ ಎಂಬ ಖದೀಮರ ಮಾತು ನಂಬಿ ಕತ್ತಿನಲ್ಲಿದ್ದ ಸರ, ಓಲೆ, ಉಂಗುರ ಹಾಗೂ ಇನ್ನುಳಿದ ಚಿನ್ನಾಭರಣ ನೀಡಿದ್ದರು. ಕಳ್ಳರು ಚಿನ್ನವನ್ನು ಪಾತ್ರೆಗೆ ಹಾಕಿ ಅದರಲ್ಲಿ ಪೌಡರ್ ಮತ್ತು ನೀರನ್ನು ಹಾಕಿ ಹತ್ತು ನಿಮಿಷ ಬಿಟ್ಟು ತೆಗೆಯುವಂತೆ ಮಹಿಳೆಗೆ ತಿಳಿಸಿ ತೆರಳಿದ್ದರು. ಬಳಿಕ, ಪಾತ್ರೆಯಲ್ಲಿ ಚಿನ್ನವೇ ಇರಲಿಲ್ಲ ಎಂದು ತಿಳಿದುಬಂದಿದೆ.
ಇನ್ನು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಾದ್ಯಂತ ಜಾಣತನದಿಂದ ಚಿನ್ಮಾಭರಣ ಕಸಿಯುತ್ತಿರುವ ಪ್ರಕರಣ ಹೆಚ್ಚಿದ್ದು, ಕಳ್ಳರು ಪ್ರತಿಬಾರಿಯೂ ಹೊಸ ಜಾಡನ್ನೇ ಹಿಡಿಯುತ್ತಿರುವುದು ಆತಂಕಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಬೇಕಿದೆ.