ಕೊಳ್ಳೇಗಾಲ : ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ತಿಂಗಳಿನಿಂದ ಈ ತಿಂಗಳ ಅಂತ್ಯದವರೆಗೆ 4 ಬೈಕ್ ಕಳ್ಳತನವಾಗಿವೆ. ಕಳೆದ ತಿಂಗಳಲ್ಲಿ ಡಿಸ್ಕವರಿ ಬೈಕ್ ಒಂದಷ್ಟೇ ನಾಪತ್ತೆಯಾಗಿತ್ತು. ಆದರೆ, ಪ್ರಸಕ್ತ ತಿಂಗಳಾಂತ್ಯದಲ್ಲಿ 2 ಪ್ಯಾಷನ್ ಪ್ರೊ ಬೈಕ್ ಮತ್ತು ಒಂದು ಹೊಂಡ ಡಿಯೋ ಬೈಕ್ ನಾಪತ್ತೆಯಾಗಿವೆ. ಇಷ್ಟರಲ್ಲಿ ಸದ್ಯ ಡಿಯೋ ಬೈಕ್ ಒಂದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇಂದಿನ ಪ್ರಕರಣ : ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರು ಚಿಕಿತ್ಸೆ ಪಡೆದು ಬರುವಷ್ಟರಲ್ಲಿ ಬೈಕ್ ಕಳೆದುಕೊಂಡಿದ್ದಾರೆ. ಹನೂರು ಅರಣ್ಯ ಇಲಾಖೆ ವಿಭಾಗದ ಫಾರೆಸ್ಟ್ ಗಾರ್ಡ್ ನಂದೀಶ್ ಎಂಬುವರು ಬೈಕ್ ಕಳೆದುಕೊಂಡವರು. ಅನಾರೋಗ್ಯಕ್ಕೊಳಗಾಗಿದ್ದ ಕಾರಣ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಮುಂಭಾಗ ಬೈಕ್ ನಿಲ್ಲಿಸಿ ಚಿಕಿತ್ಸೆ ಪಡೆದುಕೊಳ್ಳಲು ತೆರಳಿದ್ದರು.
ಹಿಂತಿರುಗುವಷ್ಟರಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ನಂತರ ಎಲ್ಲಾ ಕಡೆ ಹುಡುಕಾಡಿದ ಬಳಿಕ ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿ ನಂದೀಶ್ ದೂರು ನೀಡಿದ್ದಾರೆ. ಈ ಕುರಿತ ಪ್ರಕರಣ ಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.
ಒಟ್ಟು ಎರಡು ತಿಂಗಳಾಂತ್ಯಕ್ಕೆ ಪಟ್ಟಣದ ವ್ಯಾಪ್ತಿಯಲ್ಲಿ 4 ಬೈಕ್ ಕಳ್ಳತನವಾಗಿವೆ. 1 ಬೈಕ್ ಮಾತ್ರ ಪತ್ತೆಯಾಗಿದೆ. ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಪಟ್ಟಣ ಠಾಣೆ ಪೊಲೀಸರು, ಬೈಕ್ ಕಳುವಿನ ಪ್ರಕರಣ ಭೇದಿಸಲು ಪಿಎಸ್‌ಐ ಮಹದೇವಗೌಡ ನೇತೃತ್ವದ ತಂಡ ರಚನೆಯಾಗಿದೆ. ನಾಪತ್ತೆಯಾದ ಬೈಕ್ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ