ಗುಂಡ್ಲುಪೇಟೆ : ಸಾರ್ವಜನಿಕರು ಪೊಲೀಸರಾದಾಗ ಮಾತ್ರ ಅಕ್ರಮಗಳನ್ನು ತಡೆಯಲು ಸಾಧ್ಯ ಎಂದು ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ರಂಜಾನ್ ಮಾರನೆಯ ದಿನ ನಡೆದ ತ್ರಿವಳಿ ಕೊಲೆ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಶಾಂತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದುರದೃಷ್ಟವಶಾತ್ ಈ ರೀತಿಯ ಘಟನೆ ನಡೆದಿದೆ. ಮುಂದೆ ಇಂತಹ ಅಹಿತಕರ ಘಟನೆ ಮರುಕಳಿಸಬಾರದು. ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕು. ಯಾವುದೇ ರೀತಿಯ ದ್ವೇಷ ಸಾಧಿಸಲು ಅವಕಾಶ ನೀಡಬಾರದು ಎಂದು ಮುಸ್ಲಿಂ ಮುಖಂಡರಿಗೆ ಸೂಚಿಸಿದರು.
ಏಕಾಏಕಿ ಈ ಘಟನೆ ನಡೆಯಲು ಸಾಧ್ಯವಿಲ್ಲ. ಇದರಲ್ಲಿ ಎರಡು ಗುಂಪುಗಳ ನಡುವೆ ಇರುವ ವೈಷಮ್ಯ ಹಾಗೂ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಪೊಲೀಸ್ ಇಲಾಖೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಮೂಲಕ 15 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಉಳಿದ 3 ಮಂದಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು. ಪೊಲೀಸ್ ತನಿಖೆ ಬಗ್ಗೆ ಯಾವುದೇ ಅನುಮಾನ ಬೇಡ. ತ್ವರಿತವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಹಲವು ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದರು. ಕೆಲವರು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆ ಬಗ್ಗೆ ತಿಳಿಸಿದರು.