ಚಾಮರಾಜನಗರ: ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಉಪ್ಪಾರ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡುತ್ತೇನೆ ಎನ್ನುವ ಮೂಲಕ ಮತ್ತೊಮ್ಮೆ ಸಿಎಂ ಗಾದಿ ಕನಸನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಚಾಮರಾಜನಗರ ತಾಲೂಕಿನ ನಲ್ಲೂರು ಮೋಳೆಯಲ್ಲಿನ ಮಲ್ಲಿಗಮ್ಮ ದೇಗುಲ ಉದ್ಘಾಟಿಸಿ ಮಾತನಾಡಿದ ಅವರು, ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ, ಭಗೀರಥ ಜಯಂತಿಯನ್ನು ಸರ್ಕಾರ ಆಚರಣೆ ಮಾಡಲು ಪ್ರಾರಂಭಿಸಿದೆ. ಈ ಹಿಂದೆಯೂ ಉಪ್ಪಾರ ಜನಾಂಗ ನನ್ನನ್ನು ಆಶೀರ್ವದಿಸಿದೆ, ಮುಂದೆಯೂ ನನ್ನನ್ಮು ಆಶೀರ್ವದಿಸಿ ಎಂದು ಮನವಿ ಮಾಡಿಕೊಂಡರು.
ಅನುಭವ ಮಂಟಪದಂತೆ ವಿಧಾನಸೌಧದಲ್ಲೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪುಟ್ಟರಂಗಶೆಟ್ಟಿ ಅವರಿಗೆ 2008ರಲ್ಲಿ ಟಿಕೆಟ್ ಕೊಡಿಸಿದ್ದೆ. ಅಂದು ವಿ. ಶ್ರೀನಿವಾಸಪ್ರಸಾದ್ ಗುರುಸ್ವಾಮಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ನಾನು ಉಪ್ಪಾರ ಜನಾಂಗಕ್ಕೆ ಚಾಮರಾಜನಗರ ಇಲ್ಲವೇ ಅರಭಾವಿಯಲ್ಲಿ ಮಾತ್ರ ಟಿಕೆಟ್ ನೀಡುವ ಅವಕಾಶ ಇರುವುದರಿಂದ ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್ ಕೊಡಿಸಿದ್ದೆ ಎಂದು ನೆನಪಿಸಿಕೊಂಡರು.
ಉಪ್ಪಾರ ಜನಾಂಗದವರು ದೈವತ್ವದ ಮೇಲೆ ಅಪಾರ ನಂಬಿಕೆ ಇಡುತ್ತಾರೆ. ಅದೇ ರೀತಿ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ಕೊಡಿ. ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಎಂದರು.