ಕೊಳ್ಳೇಗಾಲ: ನಾನು ಯಾವುದೇ ಶಾಲೆಗಳ ಬಗ್ಗೆ ದೂರು ಹೇಳಿಲ್ಲ. ಪ್ರತಿಷ್ಠಿತ ಶ್ರೀಮಂತ ಶಾಲೆಗಳಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ಡ್ರಗ್ ಸೆಳತಕ್ಕೆ ಒಳಗಾಗಿದ್ದಾರೆ. ಇದು ಅನೇಕ ವರ್ಷಗಳಿಂದ ಚೆರ್ಚೆಯಾಗುತ್ತಿರುವ ವಿಚಾರ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಶಶಿಕುಮಾರ್ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಡ್ರಗ್ ಪೆಡ್ಲರ್ಗಳು ಈ ರೀತಿಯ ಶಾಲೆಗಳನ್ನ ಆರಿಸಿಕೊಳ್ಳುತ್ತಾರೆ. ಕ್ಯಾಮ್ಸ್ ಶಾಲೆಗಳಿಗೆ ಸಂಬಂಧಿಸಿದ ವಿಷಯ ಇದಲ್ಲ. ಡ್ರಗ್ಸ್ ವಿಚಾರ ಬಂದಾಗಲೆಲ್ಲ ಪಾರ್ಶ್ ಶಾಲೆಯ ಮಕ್ಕಳನ್ನ ಸೆಳೆಯುತ್ತಿದ್ದಾರೆ. ಈ ಬಗ್ಗೆ ವಿಶೇಷ ಗಮನ ಕೊಡಬೇಕೆಂದು ದುಃಖದಿಂದ ಹೇಳುತ್ತಿದ್ದೇನೆ ಅಷ್ಟೆ ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.
ನಾನು ಯಾವುದೇ ಶಾಲೆಗಳ ಮೇಲೆ ಆರೋಪ ಮಾಡಿಲ್ಲ. ನನ್ನ ಹೇಳಿಕೆಯನ್ನು ಶಶಿಕುಮಾರ್ ಅವರು ಆತ್ಮ ವಿಶ್ವಾಸದಿಂದ ತೆಗೆದುಕೊಳ್ಳಲಿ. ನಮ್ಮ ಜೊತೆ ಸೇರಿ ಈ ರೀತಿಯ ಶಾಲೆಗಳ ಬಗ್ಗೆ ಮಾಹಿತಿ ನೀಡಲಿ. ಡ್ರಗ್ ಪೆಡ್ಲಿಂಗ್ ಮತ್ತು ಮಾದಕ ವಸ್ತುಗಳ ಮಾರಾಟ ಸಮಾಜಕ್ಕೆ ಕಂಟಕ. ಯುವ ಜನರನ್ನ ಅಮಲಿನಟ್ಟು ದುಡ್ಡು ಮಾಡುತ್ತಿದ್ದಾರೆ. ಡ್ರಗ್ ಮಾರಾಟ ಮಾಡುವವರಿಗೂ, ನಮ್ಮ ದೇಶವನ್ನ ದ್ವೇಷ ಮಾಡುವವರಿಗೂ ಏನೂ ವ್ಯತ್ಯಾಸವಿಲ್ಲ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತೆ ಎಂದರು.