ಚಾಮರಾಜನಗರ: 2018ರ ಹುಲಿ ಅಂದಾಜು ಲೆಕ್ಕಾಚಾರದಲ್ಲಿ ಮಧ್ಯಪ್ರದೇಶ ಟೈಗರ್ ಆಫ್ ಸ್ಟೇಟ್ ಆಗಿದ್ದು ಹೇಗೆ, 4 ವರ್ಷದಲ್ಲಿ 200 ಹುಲಿ ಹೆಚ್ಚಳ ಸಾಧ್ಯವೇ? ಇವೆಲ್ಲದರ ನಡುವೆ ಕರ್ನಾಟಕ ಖುಷಿ ಪಡಲು ಕಾರಣ ಏನು ಎಂಬುದರ ಕುರಿತು ತಿಳಿಯಲು ಈ ಸ್ಟೋರಿ ನೋಡಿ.
ಹೌದು, 2014ರ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ508 ಹುಲಿಗಳು ಇವೆ ಎಂದು ಅಂದಾಜಿಸಲಾಗಿತ್ತು. ಆದರೆ, 2018ರಲ್ಲಿ 526 ಹುಲಿಗಳಿಗೆ ಏರಿಕೆ ಕಂಡಿತ್ತು. ಇದಕ್ಕೆ ಕಾರಣ ಹುಲಿಗಳ ಅಧ್ಯಯನ ನಡೆಸಲು ಹೆಚ್ಚಿನ ಪ್ರದೇಶಗಳನ್ನು ಆಯ್ದುಕೊಂಡದ್ದು ಮತ್ತು ಪ್ರತಿ 2 ಚದರ ಕಿಮೀಗಳಿಗೆ ಕ್ಯಾಮರಾ ಟ್ರಾಪಿಂಗ್ಗಳನ್ನು ಬಳಸಿದ್ದು ಎನ್ನಲಾಗ್ತಿದೆ.
ಈ ಹಿಂದಿನ ಗಣತಿಗಳಲ್ಲಿ ಕೇವಲ ಹುಲಿ ಸಂರಕ್ಷಿತ ಪ್ರದೇಶಗಳನಷ್ಟೇ ಆಯ್ದುಕೊಳ್ಳಲಾಗಿತ್ತು. ಈಗಿನ ಗಣತಿಯಲ್ಲಿ ಕಾಡಂಚಿನ ಪ್ರದೇಶಗಳು, ವನ್ಯಜೀವಿ ಧಾಮಗಳಲ್ಲೂ ಅಧ್ಯಯನ ನಡೆಸಲಾಗಿದೆ. ಈಗ ಬಿಡುಗಡೆಗೊಳಿಸಿರುವ ಹುಲಿ ಅಂದಾಜಿನ ಲೆಕ್ಕ ಅಪೂರ್ಣವಾಗಿದೆ ಎಂದು ವರದಿಯಾಗಿದೆ. ಸಮಗ್ರ ವರದಿ ಅಧಿಕೃತವಾಗಿ ಇನ್ನಷ್ಟೇ ಹೊರ ಬೀಳಬೇಕು. ಅಧ್ಯಯನದ ವಿವರಗಳು, ವನ್ಯಜೀವಿ ಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಹುಲಿ ಸಂಖ್ಯೆ ಇನ್ನೂ ಬಿಡುಗಡೆಯಾಗಿಲ್ಲ. ಕ್ಷೇತ್ರ ಅಧ್ಯಯನದ ಮಾಹಿತಿ ಮತ್ತು ಕ್ಯಾಮರಾ ಟ್ರಾಪಿಂಗ್ನಲ್ಲಿ ಒಟ್ಟು ಎಷ್ಟು ಹುಲಿಗಳು ಸೆರೆಯಾಗಿವೆ ಎಂಬ ಮಾಹಿತಿ ಕೂಡ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ತಿಳಿದು ಬಂದಿದೆ.
ಈ ಬಾರಿ ಕರ್ನಾಟಕದಲ್ಲಿನ ಹುಲಿ ಸಂರಕ್ಷಿತ ಪ್ರದೇಶಗಳಷ್ಟೆ ಅಲ್ಲದೇ ಕಾವೇರಿ ವನ್ಯಜೀವಿಧಾಮ ಸೇರಿದಂತೆ 6-7 ಪ್ರದೇಶಗಳಲ್ಲಿ ಹೊಸದಾಗಿ ಗಣತಿ ಕಾರ್ಯ ಮಾಡಲಾಗಿದ್ದು, 2014ರಲ್ಲಿ 406 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಈ ಬಾರಿ ಅದು 524ಕ್ಕೇರಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕೆನ್ನುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಅದು ಜಾರಿಯಾದರೆ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಮತ್ತಷ್ಟು ಏರಲಿದೆ. ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟ ಪ್ರದೇಶದಲ್ಲೂ ಹುಲಿ ಸಂಚಾರ ಇರುವುದು ಕಂಡುಬಂದಿದ್ದು, ಪಾರ್ವತಿ ಬೆಟ್ಟದ ಪ್ರದೇಶವನ್ನು ಸೆಕ್ಷನ್ 4ರಿಂದ ಸೆಕ್ಷನ್ 17ಕ್ಕೆ ವರ್ಗಾಯಿಸಬೇಕು ಎಂದು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ರಾಜೇಶ್ ಪತ್ರ ಬರೆದಿದ್ದಾರೆ. ಒಂದು ವೇಳೆ ಇದು ಜಾರಿಯಾದರೆ ಹುಲಿಗಳಿಗೆ ಸೂಕ್ತ ಪರಿಸರ ಒದಗಿಸಿಕೊಟ್ಟಂತಾಗುತ್ತದೆ.
ವನ್ಯಜೀವಿ ತಜ್ಞರು ಏನಂತಾರೆ? 2014ಕ್ಕೆ ಹೋಲಿಸಿದರೆ ಹುಲಿಗಳ ಸಂಖ್ಯೆಯನ್ನು ಅಂದಾಜಿಸಲು ಅಧ್ಯಯನ ನಡೆಸಿದ ಪ್ರದೇಶ ಶೇ. 25ರಷ್ಟು ಹೆಚ್ಚಿಸಲಾಗಿದೆ (92,164 ರಿಂದ 121,337 ಚದರ ಕಿಲೋಮೀಟರಿಗೆ). ಕ್ಯಾಮರಾ ಟ್ರಾಪ್ ಹಾಕಿದ ಸ್ಥಳಗಳ ಸಂಖ್ಯೆಯೂ ಕೂಡ ಸುಮಾರು ಮೂರು ಪಟ್ಟು ಹೆಚ್ಚಾಗಿದೆ (9,735 ರಿಂದ 26,838) ಮತ್ತು ಅಧ್ಯಯನ ನಡೆಸಿದ ರಾಜ್ಯಗಳು 18ರಿಂದ 21ಕ್ಕೆ ಏರಿದೆ. ಹಾಗಾಗಿ ಕಳೆದ ಪ್ರಯತ್ನಕ್ಕಿಂತ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಇವೆಲ್ಲವೂ ಹೆಚ್ಚಿನ ಹುಲಿಗಳನ್ನು ಗುರುತಿಸಲು ಮತ್ತು ಫಲಿತಾಂಶ ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಆದರೆ, ಈ ಪ್ರಯತ್ನದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಹುಲಿಗಳನ್ನು ಹುಲಿಯ ಸಂಖ್ಯೆ ಮತ್ತು ಸಾಂದ್ರತೆಯನ್ನು ಅಂದಾಜಿಸಲು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಹಿಂದಿನ ಪ್ರಯತ್ನದಲ್ಲಿ ಒಂದೂವರೆ ವರ್ಷಕ್ಕಿಂತ ಅಧಿಕ ವಯಸ್ಸಿನ ಹುಲಿಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಸಾಮಾನ್ಯವಾಗಿ ಇಂತಹ ವೈಜ್ಞಾನಿಕ ಅಧ್ಯಯನಗಳಲ್ಲಿ ವಯಸ್ಕ (ಮೂರು ವರ್ಷಕ್ಕಿಂತ ಅಧಿಕ ವಯಸ್ಸಿನ) ಹುಲಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಏಕೆಂದರೆ ಮರಿಗಳು ಮತ್ತು ಚಿಕ್ಕ ಹುಲಿಗಳಲ್ಲಿ ಸಾವಿನ ಪ್ರಮಾಣ ಅಧಿಕವಾಗಿರುತ್ತದೆ ಎಂದು ಈಟಿವಿ ಭಾರತದೊಂದಿಗೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಂಖ್ಯೆಗಿಂತ ಭವಿಷ್ಯ ಮುಖ್ಯ: ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದನ್ನು ಕಂಡು ಕೇವಲ ಖುಷಿ ಪಡದೇ 200-300 ವರ್ಷಗಳ ಬಳಿಕ ಆ ಪ್ರಾಣಿಯ ಇರುವಿಕೆ, ಅರಣ್ಯ ಪ್ರದೇಶಗಳ ವಿಸ್ತಾರವನ್ನು ಹೆಚ್ಚಿಸುವ ಬಗೆ ಕುರಿತು ಜೀವ ವಿಜ್ಞಾನದ ನೆಲೆಗಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ, ವನ್ಯ ಸಂಪತ್ತನ್ನು ಉಳಿಸುವ ಜೊತೆಗೆ ವನ್ಯಜೀವಿಗಳ ಬಲಿಷ್ಠತೆಯನ್ನೇ ಮುಂದಿನ ಪೀಳಿಗೆಗೂ ಕಾಪಾಡಬೇಕಿದೆ. ಸಂಖ್ಯೆಯೊಂದಿಗೆ ಜೀವ ವಿಜ್ಞಾನ ನೆಲೆಗಟ್ಟಿನ ದೂರದರ್ಶಿತ್ವವೂ ಮುಖ್ಯ ಎಂದು ವನ್ಯಜೀವಿ ತಜ್ಞರಾದ ಕೃಪಾಕರ್ ಹೇಳುತ್ತಾರೆ.