ಕೊಳ್ಳೇಗಾಲ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಒಂದೇ ಸೂರಿನ ಎರಡು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಸತ್ತೇಗಾಲ ಗ್ರಾಮದಲ್ಲಿ ನಡೆದಿದೆ. ಸತ್ತೇಗಾಲ ಗ್ರಾಮದ ಕೋಟೆ ಬೀದಿಯ ಚಿಕ್ಕರಾವಳಯ್ಯ ಹಾಗೂ ಮಂಜು ಎಂಬುವರ ಮನೆಯು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ.
ಘಟನೆ:
ಚಿಕ್ಕರಾವಳಯ್ಯ ಮತ್ತು ಮಂಜು ಎಂಬುವರು ಸಂಬಂಧದಲ್ಲಿ ಸಹೋದರರು. ಇವರು ಒಂದೇ ಸೂರಿನ ಎರಡು ಮನೆಯಲ್ಲಿ ಪತ್ಯೇಕವಾಗಿ ತಮ್ಮ ಕುಟುಂಬದ ಜೊತೆ ವಾಸವಿದ್ದರು. ಶುಕ್ರವಾರ ಸಂಜೆ ಸುಮಾರು 7 ಗಂಟೆ ವೇಳೆ ಚಿಕ್ಕರಾವಳಯ್ಯ ಎಂಬುವರ ಮನೆಯ ಅಡುಗೆ ಕೋಣೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅಪಾಯ ಅರಿತ ಎರಡು ಮನೆಯ ಮಂದಿ ಹೊರಕ್ಕೆ ಧಾವಿಸಿದ್ದಾರೆ.
ನೋಡ ನೋಡುತ್ತಲೇ ಬೆಂಕಿ ತೀವ್ರತೆ ಹೆಚ್ಚಾಗಿ ಮನೆ ಧಗಧಗನೆ ಹೊತ್ತಿ ಹುರಿದಿದೆ. ಬಳಿಕ ಭಾರಿ ಶಬ್ಧದೊಂದಿಗೆ ಸಿಲಿಂಡರ್ ಸ್ಫೋಟಗೊಂಡಿದ್ದು, ಸಿಲಿಂಡರ್ ಚೂರುಗಳು ಅಕ್ಕ ಪಕ್ಕದ ರಸ್ತೆಗೂ ಹಾರಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಾಹಿತಿ ತಿಳಿದು ಸ್ಥಳಕ್ಕಾಗಾಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಹಾವೇರಿ ಉಪ ವಿಭಾಗಾಧಿಕಾರಿ ಬಂಧನಕ್ಕೆ ಕೋರ್ಟ್ ವಾರೆಂಟ್.. ವಾಹನ ಜಪ್ತಿ
ಮನೆಯ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಮನೆಯನ್ನು ಕಳೆದುಕೊಂಡ ಎರಡು ಕುಟುಂಬಗಳು ಕಂಗಾಲಾಗಿವೆ. ಚಿಕ್ಕರಾವಳಯ್ಯ ಅವರ ಮನೆಯಲ್ಲಿದ್ದ 1 ಲಕ್ಷ ರೂ. ನಗದು ಹಣ ಹಾಗೂ ಸುಮಾರು 30 ಗ್ರಾಂ ಚಿನ್ನಾಭರಣ ಸುಟ್ಟು ನಾಶವಾಗಿದೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಚಿಕ್ಕರಾವಳಯ್ಯರ ಪತ್ನಿ ಸುಧಾ ಹಾಗೂ ಇಬ್ಬರು ಮಕ್ಕಳು ಮತ್ತು ಮಂಜು ಮನೆಯಲ್ಲಿ ತಾಯಿ ಮಹದೇವಮ್ಮ, ಪತ್ನಿ ಕಲಾ ಇಬ್ಬರು ಮಕ್ಕಳು ವಾಸವಿದ್ದರು.