ಚಾಮರಾಜನಗರ: ಕಾವೇರಿಯ ಹೊರಹರಿವು ಹೆಚ್ಚುತ್ತಿದ್ದಂತೆ ರಾಜ್ಯದ ಗಡಿಯಲ್ಲಿರುವ ಪ್ರಸಿದ್ಧ ಹೊಗೆನಕಲ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಜಲಪಾತವೇ ಮಾಯವಾದಂತಿದೆ.
ಈ ಕುರಿತು ತಮಿಳುನಾಡು ಮತ್ತು ಅರಣ್ಯ ಇಲಾಖೆ ಮೂಲಗಳು ವಿಡಿಯೋಗಳನ್ನು ಒದಗಿಸಿದ್ದು, ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆ ಪ್ರಸಿದ್ಧ ಹೊಗೆನಕಲ್ ಜಲಪಾತ ಕಾಣೆಯಾಗಿದೆ.
ಕಳೆದ ಬಾರಿಯ ಕಾವೇರಿ ಆರ್ಭಟಕ್ಕೆ ಶಿಥಿಲಗೊಂಡಿದ್ದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಮರದ ದಿಬ್ಬ ಇಲ್ಲವೇ ಮರದ ಕೊಂಬೆಗಳು ನೀರಿನ ಸೆಳೆತಕ್ಕೆ ಸಿಲುಕಿ ಬ್ರಿಡ್ಜ್ಗೆ ಅಪ್ಪಳಿಸಿದರೆ ಸೇತುವೆ ಮುರಿದು ಬೀಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರದಂತೆ 30 ಕಿ.ಮೀ ದೂರದ ಕೊಕ್ಕರೆಹಳ್ಳ ಗೇಟ್ ಬಳಿಯೇ ನಿರ್ಬಂಧಿಸಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲಾಡಳಿತ ಮತ್ತು ಧರ್ಮಪುರಿಯ ಜಿಲ್ಲಾಡಳಿತ ತೆಪ್ಪ ಸವಾರಿಗೆ ಅನಿರ್ಧಿಷ್ಟಾವಧಿವರೆಗೆ ನಿಷೇಧ ಹೇರಿದೆ.