ಚಾಮರಾಜನಗರ: ಗ್ರಾಮ ವಾಸ್ತವ್ಯದ ಮೂಲಕ ಜನಮನ ಸೆಳೆದಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಆದ್ರೆ 13 ವರ್ಷದ ಹಿಂದೆ ಸಿಎಂ ಆಗಿದ್ದಾಗ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ಈ ಗ್ರಾಮದಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಸಿಎಂ ಕುಮಾರಸ್ವಾಮಿ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಗೆ ಬರುವ ಬಡಗಲಮೋಳೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ವಸತಿಹೀನ ಬಡವರಿಗೆ ನಿರ್ಮಿತಿ ಕೇಂದ್ರದ ಮೂಲಕ 89 ಮನೆಗಳನ್ನು ಕಟ್ಟಿಸಿ ಕೊಡಲಾಗಿತ್ತು. ಆಗ ರಸ್ತೆಗೆ, ಮನೆಗಳಿಗೆ ಬೀದಿದೀಪ ಕಲ್ಪಿಸಲು ಹೊಸದಾಗಿ 54 ವಿದ್ಯುತ್ ಕಂಬಗಳು ಎದ್ದು ನಿಂತವು. ಆದರೆ, ಆಗ ನಿರ್ಮಿಸಿದ್ದ ಮನೆಗಳ ಗೋಡೆಗಳು ಈಗ ಬಿರುಕುಬಿಟ್ಟಿವೆ. ಸಾಕಷ್ಟು ಸಮಸ್ಯೆಗಳನ್ನು ಹೊಂದಿರುವ ಗ್ರಾಮಕ್ಕೆ ಸಿಎಂ ಬಂದರೆ ಗ್ರಾಮ ಅಭಿವೃದ್ಧಿಯಾಗಲಿದೆ ಎಂದು ಗ್ರಾಮಸ್ಥೆ ನೀಲಸಿದ್ದಶೆಟ್ಟಿ ಆಶಾವಾದ ವ್ಯಕ್ತಪಡಿಸುತ್ತಿದ್ದಾರೆ.
ಬಳಕೆ ಮಾಡಿದ ಪ್ಲಾಸ್ಟಿಕ್ ಚೀಲಗಳಿಂದ ನೂಲು ತೆಗೆದು ಹಗ್ಗ ಮಾಡುವ ಕಾಯಕವನ್ನು ಇಲ್ಲಿನ ಜನರು ಅವಲಂಬಿಸಿದ್ದು, ಈಗಲೂ ಮರದ ಕೆಳಗೆಯೇ ಇವರು ಹಗ್ಗ ನೂಲಬೇಕಿದೆ. ಒಂದು ವೇಳೆ ಮಳೆ ಬಂದರೆ ಕೆಲಸ ನಿಲ್ಲಿಸಿ ಮಳೆ ನಿಲ್ಲುವುದನ್ನೇ ಕಾಯಬೇಕಾದ ಪರಿಸ್ಥಿತಿ ಇಲ್ಲಿನವರದ್ದು. ನೂಲು ತೆಗೆಯಲು ಕೈಗಾರಿಕಾ ಶೆಡ್‌ಗಳನ್ನು ನಿರ್ಮಿಸಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದ್ರೆ ಈ ಭರವಸೆ ಹುಸಿಯಾಗಿದೆ.
ಇನ್ನು ಗ್ರಾಮದ ಜನರು ಬಸ್ ಹತ್ತಿ ಪೇಟೆ ಪಟ್ಟಣಕ್ಕೆ ಬರಬೇಕೆಂದರೆ ಮೂರು ಕಿಮೀ ನಡೆಯಬೇಕಿದೆ. ಹಾಗಾಗಿ ಈಗಲಾದ್ರೂ ನಮ್ಮ ಸಂಕಷ್ಟ ಗುರುತಿಸಿ ನಮಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.