ಕೊಳ್ಳೇಗಾಲ: ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಎನ್ ಮಹೇಶ್, ಬಜೆಟ್ನಲ್ಲಿ ನಮ್ಮ ಜಿಲ್ಲೆಯನ್ನು ಯಾವ ರೀತಿಯಲ್ಲೂ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಅರಿಶಿಣ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಗೋಪಿನಾಥಂ ವನ್ಯಜೀವಿ ಸಫಾರಿ ತೆರೆಯುವ ನಿರ್ಧಾರ ಹಾಗೂ ಬೂದಿಪಡಗದಲ್ಲಿ ಆನೆ ಶಿಬಿರ ಮಾಡಬೇಕೆಂಬ ವಿಚಾರವಷ್ಟೆ ಬಜೆಟ್ನಲ್ಲಿದ್ದು , ಬಜೆಟ್ನಲ್ಲಿ ಚಾಮರಾಜನಗರವನ್ನ ಪ್ರಸ್ತಾಪಿಸಿಲ್ಲ. ಈವರೆಗಿನ ಸರ್ಕಾರಗಳು ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಈಗ ತಿಳಿದು ಬಂದಿದೆ ಎಂದರು.
2006ರಲ್ಲಿ ಯಳಂದೂರಿನ ಆಸ್ಪತ್ರೆ ತಾಲ್ಲೂಕು ಆಸ್ಪತ್ರೆಯಾಗಿ ಬಡ್ತಿ ಹೊಂದಿದೆ. ನೂರು ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಘೋಷಣೆಯಾಗಿ 15 ವರ್ಷಗಳಾಗಿವೆ. ಇಂತಹ ಆಸ್ಪತ್ರೆಗೆ ಯಾವ್ಯಾವ ಸೌಕರ್ಯ ಕೊಡಬೇಕೆಂಬ ಕಾಮನ್ ಸೆನ್ಸ್ ಬೇಡ್ವ ಸರ್ಕಾರಕ್ಕೆ ಎಂದು ಗುಡುಗಿದ ಶಾಸಕ ಎನ್.ಮಹೇಶ್, ಒಂದು ತಾಲ್ಲೂಕು ಆಸ್ಪತ್ರೆಗೆ ಮೂಲಸೌಕರ್ಯ ಕೊಡಬೇಕೆಂದು ಆರೋಗ್ಯ ಇಲಾಖೆಗೆ ಗೊತ್ತಿಲ್ವ ಎಂದು ಪ್ರಶ್ನಿಸಿದರು.
ಈ ಬಜೆಟ್ ನಲ್ಲಿ ಘೋಷಣೆಯಾಗಿ ಆಸ್ಪತ್ರೆ ಅಭಿವೃದ್ಧಿ ಆಗುತ್ತದೆ ಅಂತ ನಾನು ತುಂಬಾ ನಿರೀಕ್ಷೆ ಮಾಡಿಕೊಂಡಿದ್ದೆ. ಆದರೆ, ಏನು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇನ್ನು ಬಜೆಟ್ ನಲ್ಲಿ ಸಾರ್ವಜನಿಕರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ. ಇದೊಂದೇ ಪ್ಲಸ್ ಪಾಯಿಂಟ್ ಆದರೂ ತೆರಿಗೆ ಮುಕ್ತ ಬಜೆಟ್ ಅಂದಮೇಲೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚು ಕಡಿಮೆ 25 ರೂ ಕಡಿಮೆ ಆಗಬೇಕು ಎಂದು ತಿಳಿಸಿದರು.