ಚಾಮರಾಜನಗರ: ಕೆಬ್ಬೇಕಟ್ಟೆ ಶನೀಶ್ವರ ದೇಗುಲದಲ್ಲಿ ದಲಿತ ಯುವಕನಿಗೆ ಥಳಿಸಿದ್ದನ್ನು ಖಂಡಿಸಿ ದಲಿತಪರ ಸಂಘಟನೆಗಳು ಕರೆ ನೀಡಿದ್ದ ಜಿಲ್ಲಾಕೇಂದ್ರ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು ಭಾಗದಿಂದ ಬಂದಿದ್ದ ನೂರಾರು ಯುವಕರು, ಪ್ರಗತಿಪರ ಹೋರಾಟಗಾರರು ಭುವನೇಶ್ವರಿ ವೃತ್ತದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆದು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಘಟನೆ ವಿರುದ್ಧ ಆಕ್ರೋಶ ಹೊರಹಾಕಿದರು.
ರಸ್ತೆ ತಡೆ ಬಳಿಕ ಭಿತ್ತಿಪತ್ರಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿದರು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರಕರಣವನ್ನು ಎಸ್ಐಟಿಗೆ ವಹಿಸಿ ಸಂತ್ರಸ್ತ ಯುವಕನಿಗೆ ಪರಿಹಾರ ನೀಡಬೇಕು. 2015ರ ಸಂತೇಮರಹಳ್ಳಿ ಜೋಡಿಕೊಲೆ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿದ್ದು, ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ, ಡಿಸಿ ಕಾವೇರಿ ಮಾತನಾಡಿ, ದಲಿತ ಯುವಕನಿಗೆ ಥಳಿಸಿದ್ದು ಅಮಾನವೀಯ ಘಟನೆ, ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರಕ್ಕೆ ನಿಮ್ಮ ಮನವಿಯನ್ನು ಕಳುಹಿಸುವುದಾಗಿ ತಿಳಿಸಿದರು.
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಇದ್ದಿದ್ದರಿಂದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇರಲಿಲ್ಲವಾದರೂ ಖಾಸಗಿ ಶಾಲಾ-ಕಾಲೇಜುಗಳು ಬೆಳಗ್ಗೆ ರಜೆ ಘೋಷಣೆ ಮಾಡಿದವು. ತಾಲೂಕು ಕಚೇರಿಯನ್ನು ಮುಚ್ಚಿದ್ದರಿಂದ ಗ್ರಾಮೀಣ ಭಾಗದಿಂದ ಬಂದ ಜನರು ಆಧಾರ್ ಕಾರ್ಡ್, ಭೂಮಾಪನ, ಆರ್ಟಿಸಿ ಪಡೆಯಲಾಗದೇ ಪರಿತಪಿಸಿದರು.
ವರ್ತಕರ ಸಂಘ ಬಂದ್ಗೆ ಬೆಂಬಲ ನೀಡಿದ್ದರಿಂದ ಅಂಗಡಿ, ಹೋಟೆಲ್ಗಳು ಹಾಗೂ ಮೆಡಿಕಲ್ ಶಾಪ್ಗಳು ಮುಚ್ಚಿದ್ದವು. ನಂತರ ಮಧ್ಯಾಹ್ನದ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರಳಿತು.