ಚಾಮರಾಜನಗರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ನಗರದ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿರುವ ಬಾಪುವಿನ ಛಾಯಾಚಿತ್ರ ಪ್ರದರ್ಶನ ಹಾಗೂ ಜೀವನಗಾಥೆ ಚಿತ್ರ ಪ್ರದರ್ಶನ ಗಮನ ಸೆಳೆಯುತ್ತಿದೆ.
ಅ. 14ರಿಂದ 16ರವರೆಗೆ ಆಯೋಜಿಸಿರುವ ಈ ಛಾಯಚಿತ್ರ ಪ್ರದರ್ಶನ ಹಾಗೂ ಮಹಾತ್ಮಾ ಗಾಂಧಿಯ ಪ್ರತಿಮೆ ಕೈಬೀಸಿ ಕರೆಯುತ್ತಿದ್ದು, ವಿರಳವಾದ 100 ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪಾಪುವಿನಿಂದ ಬಾಪುವಾದ ಬಗೆ, ದಕ್ಷಿಣ ಆಪ್ರಿಕಾದಲ್ಲಾದ ಅವಮಾನಕ್ಕೆ ಅಹಿಂಸಾ ಹೋರಾಟಗಾರನಾದ ಪರಿ, ಗಾಂಧೀಜಿ ಅವರ ಸತ್ಯಾಗ್ರಹಗಳು, ದಂಡಿಯಾತ್ರೆ, ಚರಕ ಆಂದೋಲನ, ಕ್ವಿಟ್ ಇಂಡಿಯಾ ಚಳವಳಿ, ಭಾರತ- ಪಾಕಿಸ್ತಾನದ ಇಬ್ಭಾಗ, ಗಾಂಧಿ ಹತ್ಯೆ ಹಾಗೂ ಅಂತಿಮ ಯಾತ್ರೆಯ ಅಮೂಲ್ಯ ಚಿತ್ರಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳಿರುವ ಈ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರವೀಂದ್ರನಾಥ್ ಟಾಗೋರ್, ನೆಹರೂ, ಸುಭಾಷ್ ಚಂದ್ರ ಬೋಸ್, ಅಬ್ದುಲ್ ಗಫರ್ ಖಾನ್, ಸಿ. ಆರ್. ದಾಸ್,ಮಹಮ್ಮದ್ ಅಲಿ ಜಿನ್ನಾ ಜತೆಗೆ ಕಳೆದ ಚಿತ್ರಗಳು, ಕರ್ನಾಟಕಕ್ಕೆ ಮಹಾತ್ಮಾ ಭೇಟಿ ನೀಡಿದ್ಧ ಸ್ಥಳಗಳ ಪಟ್ಟಿ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.
ಗಾಂಧಿಯೊಂದಿಗೆ ಸೆಲ್ಫಿ:
ಮುಖ್ಯ ದ್ವಾರದಲ್ಲಿ ನಿಂತ ಭಂಗಿಯಲ್ಲಿರುವ ಬಾಪು ಪ್ರತಿಮೆ ಯುವ ಜನತೆಯನ್ನೂ ಆಕರ್ಷಿಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು, ಹಿರಿಯರು, ನೌಕರರು ಗಾಂಧಿಯೊಂದಿಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಧನ್ಯತೆ ಮೆರೆಯುತ್ತಿದ್ದಾರೆ.