ಚಾಮರಾಜನಗರ : ಮನಸ್ಸಿನ ದುಗುಡ, ಇಷ್ಟಾರ್ಥ ಸಿದ್ಧಿಗೆ ದೇಗುಲಕ್ಕೆ ಹೋಗುವುದು ಸಾಮಾನ್ಯ. ಆದರೆ, ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡಲೆಂದೇ ಜನ ಬರುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿರುವ ಕೆಲ ಸ್ಥಳೀಯರು ತಮ್ಮ ಮನೆಗಳಲ್ಲಿ ರಾಜಾರೋಷವಾಗಿ ಇಸ್ಪೀಟ್ ಆಡಿಸುತ್ತಿದಾರೆ ಎನ್ನಲಾಗಿದೆ. ಇನ್ನು, ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಇಸ್ಪೀಟ್ ಅಡ್ಡೆಯ ದೃಶ್ಯ ಸೆರೆಹಿಡಿದು ಈಟಿವಿ ಭಾರತಕ್ಕೆ ನೀಡಿದ್ದಾರೆ.
ಅತ್ತಕಡೆ ತಮಿಳುನಾಡಿನಿಂದ ಈ ಕಡೆ ಹನೂರು, ಕೊಳ್ಳೇಗಾಲ ಭಾಗದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಸೋಗಲ್ಲಿ ಬರುವ ಜೂಜುಕೂರರು ಸಾವಿರಾರು ರೂ. ಬಾಜಿ ಕಟ್ಟಿ ಅಂದರ್ ಬಾಹರ್, ಮೂರೆಲೆ ಆಟಗಳನ್ನು ಆಡುತ್ತಿದ್ದಾರೆ.
ಆದರೆ, ಈ ದೃಶ್ಯ ಪೊಲೀಸರ ಕಣ್ಣಿಗೆ ಬೀಳದಿರುವುದು ವಿಪರ್ಯಾಸ. ಲಕ್ಷಾಂತರ ಭಕ್ತರು ಶ್ರದ್ಧೆ, ನಂಬಿಕೆಗಳಿಂದ ಪಾವನವಾಗಲೂ ಮಾದಪ್ಪನ ಬೆಟ್ಟಕ್ಕೆ ಬಂದರೇ ಈ ರೀತಿಯ ಕೆಲ ಜೂಜುಕೂರರು ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ.