ಚಾಮರಾಜನಗರ : ಕೊರೊನಾ ನಡುವೆ ಎಸ್ಎಸ್ಎಲ್ಸಿ ತರಗತಿಗಳು ಆರಂಭವಾಗುತ್ತಿರುವುದರಿಂದ ಟೈಲರ್ ಒಬ್ಬರು 6 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ನೀಡಲು ಮುಂದಾಗಿದ್ದಾರೆ. ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದ ವೈ.ಯು.ಖಾನ್ ಎಂಬ ಸಮಾಜಮುಖಿ ಟೈಲರ್ ಮೈಸೂರಿನಲ್ಲಿ 6 ಸಾವಿರ ಮಾಸ್ಕ್ಗಳನ್ನು ಖರೀದಿಸಿದ್ದು ಶುಕ್ರವಾರದಿಂದ ಚಾಮರಾಜನಗರ ತಾಲೂಕಿನ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಖಾನ್ ಕಳೆದ 12 ವರ್ಷದಿಂದ ಚಂದಕವಾಡಿಯಲ್ಲಿ ಟೈಲರ್ ಆಗಿ ದುಡಿಮೆ ನಡೆಸುತ್ತಿದ್ದು, ವೃತ್ತಿ ಮೂಲಕವೇ ಸಮಾಜಸೇವೆ ಮಾಡುತ್ತಿದ್ದಾರೆ. ಕೇವಲ 100 ರೂ.ಗಳಿಗೆ ರಿಯಾಯಿತಿ ದರದಲ್ಲಿ ಶಾಲಾ ಸಮವಸ್ತ್ರ ಹೊಲಿದುಕೊಡಲು ಮುಂದಾಗಿ ಈಗ ತಾಲೂಕಿನ 30ಕ್ಕೂ ಶಾಲೆಗೆ ತಮ್ಮ ಸೇವೆ ವಿಸ್ತರಿಸಿದ್ದಾರೆ.
ಖಾನ್ ಕೇವಲ ಶಾಲಾ ಸಮವಸ್ತ್ರ ಮಾತ್ರ ತಯಾರಿಸಲಿದ್ದು, ಖಾಸಗಿ ಶಾಲೆಗಳಿಗೆ ಸಾಮಾನ್ಯ ದರದಂತೆ ಸಮವಸ್ತ್ರ ಹೊಲೆದುಕೊಡಲಿದ್ದು ಸರ್ಕಾರಿ ಶಾಲೆಗಳಿಗೆ ರಿಯಾಯಿತಿ ದರದಲ್ಲಿ ಹೊಲೆಯುತ್ತಾರೆ. ಅದರಲ್ಲೂ, 100 ಮಂದಿ ಶಾಲಾ ಸಮವಸ್ತ್ರದಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಹೊಲೆದುಕೊಡುತ್ತಿದ್ದು, ಸಾವಿರಾರು ಶಾಲಾ ಮಕ್ಕಳು ರಿಯಾಯಿತಿಯ ಫಲಾನುಭವಿಗಳಾಗಿದ್ದಾರೆ.
ಶಾಲೆಯ ಜೊತೆಗೆ ನಂಟಿಟ್ಟುಕೊಂಡಿರುವ ವೈ.ಯು.ಖಾನ್ ಸದ್ಯ 6 ಸಾವಿರ ಮಾಸ್ಕ್ಗಳನ್ನು ನೀಡುವ ಮೂಲಕ ಮಕ್ಕಳ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ತೋರ್ಪಡಿಸಿ ಶಾಲಾರಂಭ ಆಗುತ್ತಿರುವುದಕ್ಕೆ ಖುಷಿ ಹಂಚಿಕೊಂಡಿದ್ದಾರೆ.