ಚಾಮರಾಜನಗರ: ಎಣ್ಣೆ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿ 2 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಯುವಕರನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.
ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಮಲ್ಲೇಶ್, ಕೋಲಾರ ಜಿಲ್ಲೆ ಮಾಲೂರಿನ ಮಂಜು, ಮನು ಮತ್ತು ರಿತೇಶ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಬೈರನಾಥ ಗ್ರಾಮದ ಶೇಖರ್ ಹಾಗೂ ಮಹೇಂದ್ರ ಎಂಬುವರು ಪರಾರಿಯಾಗಿದ್ದಾರೆ.
ಕಳೆದ 10 ರಂದು ಹನೂರು ತಾಲೂಕಿನ ಅಜ್ಜಿಪುರ ಅರಣ್ಯ ನರ್ಸರಿ ಬಳಿ ಸನ್‌ಪ್ಯೂರ್ ಆಯಿಲ್ ಏಜೆನ್ಸಿ ಮಾಲೀಕರಾದ ಶ್ರೀನಿವಾಸ್ ಅವರ ಪುತ್ರ ನಿತಿನ್ ಎಣ್ಣೆ ಮಾರಾಟದ ಹಣವನ್ನು ಸಂಗ್ರಹಿಸಿಕೊಂಡು ಬರುತ್ತಿದ್ದ ವೇಳೆ ಟಾಟಾ ಇಂಡಿಕಾ ಕಾರಿನಿಂದ ಡಿಕ್ಕಿ ಹೊಡೆದು, ನಿತಿನ್ ಬಳಿ ಇದ್ದ ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ದರು. ಈ ಕುರಿತು ಹನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕೃತ್ಯಕ್ಕೆ ಬಳಸಲಾಗಿದ್ದ 3 ಬೈಕ್ ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ.