ಚಾಮರಾಜನಗರ: ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಹಾಗೂ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮತ್ತೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಫೇಸ್ ಬುಕ್ ನಲ್ಲಿಂದು ಸವಾಲ್ವೊಂದನ್ನ ಸ್ವೀಕರಿಸಿದ್ದಾರೆ.
ಜಿಲ್ಲೆಯ ಪತ್ರಕರ್ತ ಗೌಡಹಳ್ಳಿ ಮಹೇಶ್ ಎಂಬವರು 'ಉಸ್ತುವಾರಿಯಾಗಿ ಜಿಲ್ಲೆಯಲ್ಲಿ ನಿಮ್ಮದು ಕಳಪೆ ಸಾಧನೆ, ನೀವು ಏನೇನು ಕೆಲಸ ಮಾಡಿದ್ದೀರಿ, ನಿಮ್ಮ ಸಾಧನೆಯನ್ನು ಒಮ್ಮೆ ಬರೆಯಿರಿ. ಅದಕ್ಕೆ ನಾನು ಟಿಪ್ಪಣಿ ಬರೆಯುತ್ತೇನೆ' ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ನಾನು ಉತ್ತರ ಬರೆಯುತ್ತೇನೆ ಎಂದು ಸುರೇಶ್ ಕುಮಾರ್ ಚಾಲೆಂಜ್ ಸ್ವೀಕರಿಸಿದ್ದಾರೆ.
ಈ ಕುರಿತು ಸವಾಲು-ಜವಾಬ್ ಎಂಬ ಶಿರ್ಷಿಕೆಯನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಮಂದಿ ನೆಟ್ಟಿಗರು ಪರ-ವಿರೋಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ, ಸುರೇಶ್ ಕುಮಾರ್ ಅವರ ಬರವಣಿಗೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಹೆಚ್ಚು ಬಾರಿ ಭೇಟಿ: ಚಾಮರಾಜನಗರ ಉಸ್ತುವಾರಿ ವಹಿಸಿಕೊಂಡ ಬೇರೆ ಕ್ಷೇತ್ರದ ಸಚಿವರಲ್ಲಿ ಅತಿ ಹೆಚ್ಚು ಬಾರಿ ಜಿಲ್ಲೆಗೆ ಭೇಟಿಯಿತ್ತು, ವಾಸ್ತವ್ಯ ಮಾಡಿದವರಲ್ಲಿ ಸುರೇಶ್ ಕುಮಾರ್ ಮೊದಲಿಗರು. ಶಾಲಾ ವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಎರಡೆರಡು ಬಾರಿ ಮಾಡಿದ್ದ ಸುರೇಶ್ ಕುಮಾರ್ ಗಡಿಭಾಗವಾದ ಗೋಪಿನಾಥಂನಲ್ಲಿ ಕನ್ನಡ ಮಾಧ್ಯಮ ಶಾಲೆ ತೆರೆಯಲು ಕಾರಣಕರ್ತರಾಗಿದ್ದಾರೆ.
ಅಲ್ಲದೆ, ಕೊರೊನಾ ತಡೆಗೂ ಶ್ರಮಿಸಿದ್ದರು. ಆದರೆ, ಆಮ್ಲಜನಕ ದುರಂತದಿಂದ ಇವರ ಕಾರ್ಯಕ್ಷಮತೆ ಪ್ರಶ್ನೆಗೀಡಾಯಿತು. ಅಧಿಕಾರಿಗಳ ಕೈಯಲ್ಲಿ ಕಾರ್ಯ ಮಾಡಿಸಲು ವಿಫಲರಾಗಿದ್ದಾರೆ, ಆಮ್ಲಜನಕ ದುರಂತದ ಹೊಣೆಯನ್ನು ಸುರೇಶ್ ಕುಮಾರ್ ಅವರೇ ಹೊರಬೇಕೆಂಬ ಟೀಕೆಗಳು ವ್ಯಕ್ತವಾಗಿದ್ದವು. ಈಗ ಉಸ್ತುವಾರಿ ಆಗಿದ್ದ ವೇಳೆಯ ತಮ್ಮ ಸಾಧನೆಗಳನ್ನು ಬರೆಯುತ್ತೇನೆ ಎಂದು ಮಾಜಿ ಸಚಿವರೇ ಹೇಳಿದ್ದು ಅವರ ವಿಶ್ವಾಸ ತೋರಿದರೆ ಯಾವ್ಯಾವ ಪಟ್ಟಿ ಕೊಡಲಿದ್ದಾರೆ ಎಂಬ ಕುತೂಹಲ ನೆಟ್ಟಿಗರಲ್ಲಿ ಮನೆ ಮಾಡಿದೆ.