ಚಾಮರಾಜನಗರ: ಪ್ರವಾಸಕ್ಕೆ ತೆರಳಿದ ಚಾಮರಾಜನಗರ ಡಿಪೋ ವ್ಯಾಪ್ತಿಯ ಬಸ್ಸೊಂದು ಬರಲು 5 ತಾಸು ತಡವಾಗಿದ್ದಕ್ಕೆ ಚಾಲಕನಿಗೆ ಬರೋಬ್ಬರಿ 12,300 ರೂ. ದಂಡ ಕಟ್ಟುವಂತೆ ನೋಟಿಸ್ ಕೊಟ್ಟಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಲಕ ದುರ್ಗಾದಾಸ್ ಎಂಬವರಿಗೆ ಚಾಮರಾಜನಗರ ಡಿಪೋ ಮ್ಯಾನೇಜರ್ ಕುಮಾರ್ ನಾಯ್ಕ್ ನೋಟಿಸ್ ಕೊಟ್ಟಿರುವುದಾಗಿ ತಿಳಿದುಬಂದಿದೆ.
ಕಳೆದ ಫೆ.20 ರಂದು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಿಂದ ಬಣ್ಣಾರಿ, ಕೊಯಮತ್ತೂರು, ಈಶ ಧ್ಯಾನ ಕೇಂದ್ರಕ್ಕೆ ಪ್ರಯಾಣಿಕರನ್ನು ದುರ್ಗಾದಾಸ್ ಎಂಬ ಚಾಲಕ ಕರೆದೊಯ್ದಿದ್ದರು. ಆದರೆ, ಒಪ್ಪಂದದ ಕರ್ತವ್ಯ ಮುಗಿಸಿ ಡಿಪೋಗೆ ಹಿಂತಿರುಗಲು 5 ತಾಸು ತಡವಾಗಿದ್ದರಿಂದ ದಂಡ ಕಟ್ಟುವಂತೆ ನೋಟಿಸ್ ಕೊಡಲಾಗಿದೆ ಎಂದು ತಿಳಿದುಬಂದಿದೆ. ಅಂದು ಬಣ್ಣಾರಿ-ದಿಂಬಂ ಘಟ್ಟ ಪ್ರದೇಶದಲ್ಲಿ ಲಾರಿಯೊಂದು ಪಲ್ಟಿಯಾಗಿತ್ತು ಎಂದು ತಿಳಿದುಬಂದಿದೆ.
ಸಮಜಾಯಿಷಿ ಕೊಡದ ಬಸ್ ಚಾಲಕ: ಡಿಪೋಗೆ ತಡವಾಗಿ ಬಂದಿರುವುದಕ್ಕೆ ಕಾರಣ ಕೇಳಿ, ಸಕಾರಣದ ವರದಿ ಕೊಡುವಂತೆ ಹೇಳಲಾಗಿತ್ತು. 10 ದಿನಗಳಾದರೂ ಯಾವುದೇ ಉತ್ತರ ಕೊಡದಿದ್ದರಿಂದ ದಂಡ ಕಟ್ಟುವಂತೆ ಸೂಚಿಸಲಾಗಿದೆ. 5-6 ತಾಸು ತಡವಾಗಿ ಬಂದರೇ ಸಂಸ್ಥೆಗೆ ನಷ್ಟವಾಗುವುದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ದಂಡವನ್ನು ಇನ್ನೂ ಕಟ್ಟಿಸಿಕೊಂಡಿಲ್ಲ. ಚಾಲಕ ಸೂಕ್ತ ಕಾರಣ ಕೊಡಲಿ ಎಂದು ಕುಮಾರನಾಯ್ಕ್ ತಿಳಿಸಿದ್ದಾರೆ.