ಚಾಮರಾಜನಗರ: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಕುಪಿತಗೊಂಡ ರೈತನೊಬ್ಬ ಚೆಸ್ಕಾಂ ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿಹಾಕಲು ಮುಂದಾದ ಘಟನೆ, ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಕರ ನಿರಾಕರಣೆ ಚಳವಳಿ ನಡೆಸುತ್ತಿರುವ ರೈತಸಂಘದ ಶಂಕರ್ ಎಂಬವರು ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಕುಪಿತಗೊಂಡು ಮೀಟರ್ ರೀಡರ್ ರಾಮಚಂದ್ರಯ್ಯ ಎಂಬವವರನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
8,150 ರೂ. ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಶಂಕರ್ ಕರನಿರಾಕರಣೆ ಚಳವಳಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೂ ಖಾಸಗಿ ಲೇನ್ ಮನ್ ಗಳಿಂದ ಮತ್ತೆ ಸಂಪರ್ಕ ಕಲ್ಪಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದ್ದು ಕಳೆದ ವಾರವೂ ಕಡಿತಗೊಳಿಸಿದ್ದ ಸಂಪರ್ಕ ಮತ್ತೆ ಪಡೆದುಕೊಂಡಿದ್ದರು. ಇದನ್ನು ಅರಿತ ಚೆಸ್ಕಾಂ ಸಿಬ್ಬಂದಿ, ಸಂಪೂರ್ಣ ವಿದ್ಯುತ್ ತಂತಿಗಳನ್ನು ತುಂಡರಿಸಿದ್ದರಿಂದ ಕುಪಿತಗೊಂಡು ಕಂಬಕ್ಕೆ ಕಟ್ಟಿ ಹಾಕಲು ಮುಂದಾದರು ಎಂದು ತಿಳಿದುಬಂದಿದೆ.
ಸದ್ಯ, ಬೇಗೂರು ಠಾಣೆಯಲ್ಲಿ ಶಂಕರ್ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.