ಚಾಮರಾಜನಗರ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ರೈತರು ಮಂಗಳವಾರ ಅಸುನೀಗಿದ್ದಾರೆ. ಒಬ್ಬರು ಚೆಸ್ಕಾಂ ನಿರ್ಲಕ್ಷ್ಯದಿಂದಾದ್ರೆ, ಮತ್ತೊಬ್ಬರು ಫೈನಾನ್ಸ್ನವರ ಕಿರುಕುಳದಿಂದಾಗಿದೆ.
ಟ್ರ್ಯಾಕ್ಟರ್ ಸಾಲ ತೆಗೆದುಕೊಂಡಿದ್ದ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಕೃಷ್ಣಯ್ಯ (62) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೈನಾನ್ಸ್ವೊಂದರಲ್ಲಿ ಟ್ರ್ಯಾಕ್ಟರ್ ಸಾಲ ತೆಗೆದುಕೊಂಡಿದ್ದ ಇವರು ಅವರ ಕಿರುಕುಳ ತಾಳಲಾರದೆ ಸೋಮವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ಫೈನಾನ್ಸ್ವೊಂದರಲ್ಲಿ ಟ್ರ್ಯಾಕ್ಟರ್ ಸಾಲ ಪಡೆದಿದ್ದರು.
ಇದನ್ನೂ ಓದಿ: ಧಾರವಾಡ: ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
ಆದರೆ, ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಿನ್ನೆಲೆ ಎರಡು ವರ್ಷದಿಂದ ಇಎಂಐ ಕಟ್ಟಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಕಳೆದ 7 ತಿಂಗಳ ಹಿಂದೆ ಫೈನಾನ್ಸ್ನವರು ಟ್ರ್ಯಾಕ್ಟರ್ ಜಪ್ತಿ ಮಾಡಿದ್ದರು. ನಂತರ ಬಾಕಿ ಹಣ 1.94 ಲಕ್ಷ ಹಣ ಪಾವತಿಸಬೇಕು ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ.
ಈ ಮಧ್ಯೆ ಫೈನಾನ್ಸ್ನವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರಿಂದ ಬಂಧನದ ಭೀತಿಗೊಳಗಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ವಿದ್ಯುತ್ ಪ್ರವಹಿಸಿ ರೈತ ಸಾವು: ತುಂಡಾದ ವಿದ್ಯುತ್ ತಂತಿ ತುಳಿದು ಚಂದಕವಾಡಿ ಗ್ರಾಮದ ವ್ಯಕ್ತಿಯೊಬ್ಬರು ಅಸುನೀಗಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದಿದೆ. ಚಂದಕವಾಡಿ ಗ್ರಾಮದ ನಾಗರಾಜು ಮೃತ ರೈತ. ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಇದನ್ನು ಕಾಣದೇ ತುಳಿದಿದ್ದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರಿಯರಿದ್ದು ಸೂಕ್ತ ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.