ಚಾಮರಾಜನಗರ: ಸತತ ಅರಿವು, ಅಭಿಯಾನದ ಮೂಲಕ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಮುನ್ನೆಲೆಗೆ ಬಂದಿದ್ದ ಅರಣ್ಯಾಧರಿತ ಕೃಷಿ ಸೊರಗಿದ್ದು, ಇದನ್ನೇ ನಂಬಿ ನರ್ಸರಿ ಮಾಡಿಕೊಂಡಿದ್ದವರ ಬದುಕು ನಲುಗಿದೆ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಉಪ್ಪಾರ ಸಮುದಾಯದ 58ಕ್ಕೂ ಹೆಚ್ಚು ಕುಟುಂಬಗಳು ನರ್ಸರಿ ಕೃಷಿಯನ್ನೇ ಅವಲಂಬಿಸಿದ್ದು, ವಾರ್ಷಿಕವಾಗಿ 2 ಕೋಟಿಗೂ ಅಧಿಕ ಹೆಬ್ಬೇವು ಸಸಿಗಳನ್ನು ಬೆಳೆಯುತ್ತ ಬಂದಿದೆ. ಆದರೆ ಈ ಬಾರಿ ಅರ್ಧಕ್ಕರ್ಧ ಮಂದಿ ಕೊಳ್ಳುವವರಿಲ್ಲದೇ ನಾಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ.
ಹೆಬ್ಬೇವು ಜೊತೆಗೆ ಶ್ರೀಗಂಧ, ರಕ್ತ ಚಂದನ, ಓಕ್, ಸಿಲ್ವರ್, ಮಹಾಗಣಿ ಜಾತಿಯ ಸಸಿಗಳನ್ನು ಬೆಳೆಸಿದ್ದು, ಇದಕ್ಕೂ ಬೇಡಿಕೆ ಇಲ್ಲದಂತಾಗಿದೆ. 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಉಪ್ಪಾರ ಸಮುದಾಯ ನರ್ಸರಿ ಕೃಷಿ ನಡೆಸುತ್ತಿದ್ದು, ನಾಟಿ ಮಾಡಿದ ಬಳಿಕ 3 ತಿಂಗಳು ಸಸಿ ಮಾರಾಟಕ್ಕೆ ಸಿದ್ಧವಾಗುತ್ತಿತ್ತು.
ಬಂಡವಾಳವೂ ಬಂದಿಲ್ಲ: ಈ ಕುರಿತು ನರ್ಸರಿ ಕೃಷಿಕ ಪ್ರಕಾಶ್ ಮಾತನಾಡಿ, ಕಳೆದ 7 ವರ್ಷಗಳಿಂದ ನರ್ಸರಿ ಕೃಷಿ ಗ್ರಾಮದಲ್ಲಿ ಕೈ ಹಿಡಿದಿತ್ತು. ತೆಲಂಗಾಣ, ಗುಜರಾತ್, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಅರಣ್ಯ ಇಲಾಖೆಗೆ ನಮ್ಮ ಗ್ರಾಮದಿಂದಲೇ ಸಸಿಗಳು ಬಿಕರಿಯಾಗುತ್ತಿತ್ತು. ಒಂದರಿಂದ ಒಂದೂವರೆ ಕೋಟಿ ಸಸಿಗಳು ಮಾರಾಟವಾಗಿ ತಿಂಗಳಿಗೆ 50-60 ಸಾವಿರ ರೂ. ಸಂಪಾದಿಸುತ್ತಿದ್ದೆವು. ಆದರೆ, ಈ ವರ್ಷ 60 ಲಕ್ಷ ಗಿಡಗಳು ಮಾರಾಟವಾಗದೇ ಬಂಡವಾಳವೇ ಬಂದಿಲ್ಲ. ಬೇಡಿಕೆ ಕುಸಿದಿರುವುದಕ್ಕೆ ಕಾರಣವೂ ಗೊತ್ತಿಲ್ಲ ಎಂದು ಅಳಲು ತೋಡಿಕೊಂಡರು.