ಚಾಮರಾಜನಗರ: 10 ವರ್ಷಗಳ ಕಾಲ ಪ್ರೀತಿ ಪ್ರೇಮದ ನಾಟಕವಾಡಿ ಬಳಿಕ ಕೈಕೊಟ್ಟಿರುವ ಆರೋಪದಡಿ ಪೊಲೀಸ್ ಕಾನ್ಸ್ಟೇಬಲ್ ಓರ್ವನನ್ನು ಬಂಧಿಸಿರುವ ಘಟನೆ ತಾಲೂಕಿನ ಇರಸವಾಡಿ ಸುತ್ತೂರು ಗ್ರಾಮದಲ್ಲಿ ನಡೆದಿದೆ.
ಸಂತೇಮರಹಳ್ಳಿ ಪೊಲೀಸ್ ಕಾನ್ಸ್ಟೇಬಲ್ ಪ್ರಸಾದ್ ಬಂಧಿತ ಆರೋಪಿ. ಪ್ರಸಾದ್ ಅದೇ ಗ್ರಾಮದ ಯುವತಿಯನ್ನು ಬರೋಬ್ಬರಿ 10 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ದೈಹಿಕ ತೃಷೆ ತೀರಿಸಿಕೊಂಡ ನಂತರ ಕೈಕೊಟ್ಟಿದ್ದಾನೆಂದು ಯುವತಿ ಹಾಗೂ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಹುಡುಗಿ ಮನೆಯವರು ಬೇರೆಯವರೊಂದಿಗೆ ಮದುವೆ ಮಾಡಲು ಮುಂದಾದಾಗ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವರ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸಿ ಮದುವೆ ಮುರಿಯುತ್ತಿದ್ದ ಎನ್ನಲಾಗ್ತಿದೆ. ಆದ್ರೆ ಇದೀಗ ಆ ಹುಡುಗಿಗೆ ಕೈಕೊಟ್ಟು ಬೇರೆಯವಳೊಂದಿಗೆ ದೇಗುಲದಲ್ಲಿ ಮದುವೆಯಾಗಿ ನಮಗೆ ವಂಚಿಸಿದ್ದಾನೆ ಎಂದು ಯುವತಿಯ ಸಹೋದರ ದೂರಿದ್ದಾರೆ.
ಪೊಲೀಸರ ಕುಮ್ಮಕ್ಕು?: ಹುಡುಗ ಮೋಸ ಮಾಡಿದ ದೂರನ್ನು ನ.9 ರಂದು ದಾಖಲಿಸಿದ್ದು, ಆತ 13 ರಂದು ಮದುವೆಯಾಗಿದ್ದಾನೆ. ಯುವತಿಗೆ ಅನ್ಯಾಯವಾಗಲು ಚಾಮರಾಜನಗರ ಪೂರ್ವ ಠಾಣೆ ಪೊಲೀಸರ ಕುಮ್ಮಕ್ಕು ಸಹ ಕಾರಣ. ದೂರು ನೀಡಿದ ದಿನದಿಂದಲೂ ಆತನ ಪರವಾಗಿಯೇ ನಡೆದುಕೊಳ್ಳುತ್ತಿದ್ದಾರೆಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಸದ್ಯ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾನ್ಸ್ಟೇಬಲ್ ಪ್ರಸಾದ್ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.