ಚಾಮರಾಜನಗರ: ಆಮ್ಲಜನಕ ಕೊರತೆಯಾಗದಿದ್ದರೂ ಸೋಂಕಿತರು ಮೃತಪಡುತ್ತಿರುವ ಹಿನ್ನೆಲೆ ಬೆಂಗಳೂರಿನಿಂದ ವೈದ್ಯರ ಪರಿಣಿತರ ತಂಡವೊಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 15 ಮಂದಿ ಕೊರೊನಾ ಸೋಂಕಿತರಿದ್ದು. ಈ ರೀತಿ ಮರಣಕ್ಕೆ ನಿಖರ ಕಾರಣವೇನು? ಎಂದು ತಿಳಿಯಲು ಪರಿಣಿತರ ತಂಡವೊಂದನ್ನು ನೇಮಿಸಲಾಗಿದೆ. ಈ ತಂಡ ಶುಕ್ರವಾರ ಇಲ್ಲವೇ ಇಂದು ಸಂಜೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಮರಣ ಪ್ರಮಾಣ ಇಳಿಸುವುದು ಸದ್ಯ ನಮ್ಮ ಗುರಿಯಾಗಿದ್ದು, ಪರಿಣತರ ತಂಡ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಲಾಗುವುದು. ಆಕ್ಸಿಜನ್ ಕೊರತೆಯಿಂದ ಈ 20 ಮಂದಿ ಸತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸದ್ಯ 1900 ಲೀಟರ್ ಲಿಕ್ವಿಡ್ ಆ್ಯಕ್ಸಿಜನ್ ಮತ್ತು 126 ಜಂಬೊ ಸಿಲಿಂಡರ್ ಇದ್ದು, ಮತ್ತೆ 150 ಸಿಲಿಂಡರ್ ಆ್ಯಕ್ಸಿಜನ್ ಬರಲಿದೆ. ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಮಾತನಾಡಿದ್ದೇನೆ. ಅಲ್ಲಿನ ವ್ಯವಸ್ಥೆ ನೋಡಿದ್ದೇನೆ. ಸದ್ಯಕ್ಕೆ ಆಮ್ಲಜನಕ ಕೊರತೆಯಿಲ್ಲ. ಹೆಚ್ಚುವರಿ ನರ್ಸ್, ವೈದ್ಯರನ್ನು ಕೂಡ ನೇಮಿಸಲಾಗುತ್ತಿದೆ. ಬಹಳಷ್ಟು ವೈದ್ಯಕೀಯ ಸಿಬ್ಬಂದಿ ಕೊರೊನಾ ಸೋಂಕಿತರಾಗಿದ್ದಾರೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಓದಿ: ಆಕ್ಸಿಜನ್ ದುರಂತದ ಬೆನ್ನಲ್ಲೇ ಬೆಡ್ ಕೊರತೆ... ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬಗೆಹರಿಯದ ಸಮಸ್ಯೆ