ಗುಂಡ್ಲುಪೇಟೆ: ಉಪಚುನಾವಣೆಯಲ್ಲಿ ಗೆದ್ದು ತಂದ ಅನುದಾನವನ್ನು ಈಗಿನ ಶಾಸಕ ನಿರಂಜನ್ ಕುಮಾರ್ ತಮ್ಮದೆಂದು ಹೇಳಿಕೊಂಡು ಬೊಬ್ಬೆ ಹೊಡೆಯುತ್ತಿದ್ದಾರೆ. ಏಳು ತಿಂಗಳ ಅನುದಾನವನ್ನು ಇವರ 5 ವರ್ಷದ ಅವಧಿಯಲ್ಲಿಯೂ ತರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಸವಾಲೆಸೆದರು.
ಪಟ್ಟಣದಲ್ಲಿ ಗುಂಡ್ಲುಪೇಟೆ ಮತ್ತು ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಬೆಂಬಲಿತರಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಎಸ್.ಮಹದೇವಪ್ರಸಾದ್ ಭಗೀರಥನಂತೆ ತಾಲೂಕನ್ನು ಅಭಿವೃದ್ಧಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಪಕ್ಷದ ಚಿಹ್ನೆ ಇಲ್ಲದಿದ್ದರೂ ಕಾಂಗ್ರೆಸ್ ಬೆಂಬಲಿತರು ಅಧಿಕ ಮಂದಿ ಗೆದ್ದು ನಮಗೆ ಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಅನಾರೋಗ್ಯದಿಂದ ಇದ್ದರೂ ಸಹ ಇಂದು ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಹೇಳಿದರು. "ತಾಲೂಕಿನ ಅಭಿವೃದ್ಧಿಯೇ ನಮ್ಮ ಮಂತ್ರ" ಎಂದರು.
ಮಾಜಿ ಸಂಸದ ಆರ್.ಧೃವನಾರಾಯಣ್ ಮಾತನಾಡಿ, ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ 5 ವರ್ಷ ಪೂರೈಸಿದ್ದಾರೆ. ಮಹದೇವಪ್ರಸಾದ್ ಸಿದ್ದರಾಮಯ್ಯ ಅವರನ್ನು ಚಾಮರಾಜನಗರಕ್ಕೆ ಕರೆತಂದು ಕೋಟ್ಯಂತರ ರೂ. ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಬರಲು ಹೆದರುತ್ತಿದ್ದು, ಬಿಜೆಪಿ ಸರ್ಕಾರದಿಂದ ಜಿಲ್ಲೆಯ ಪ್ರಗತಿ ಶೂನ್ಯ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಶಾಶ್ವತ ಕುಡಿಯುವ ನೀರು, ಮೆಡಿಕಲ್ ಕಾಲೇಜು, ನೂತನ ಆಸ್ಪತ್ರೆ, ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾಂಗ್ರೆಸ್ ಸರ್ಕಾರದ ವೇಳೆ ಆಗಿದೆ ಎಂದರು.
ಕಾಂಗ್ರೆಸ್ ಯುವ ಮುಖಂಡ ಗಣೇಶ್ ಪ್ರಸಾದ್ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರದಲ್ಲಿ ಬಿಜೆಪಿಯವರು ಷಡ್ಯಂತ್ರ ಮಾಡಲು ಹೊರಟಿದ್ದಾರೆ. ಅವರ ಆಮಿಷಗಳಿಗೆ ನಮ್ಮ ನಿಷ್ಠಾವಂತ ಪಕ್ಷದ ಬೆಂಬಲಿಗರು ಮರುಳಾಗುವುದು ಬೇಡ. ಯಾವುದೇ ರೀತಿಯ ಆಮಿಷ ನೀಡಿದರೂ ಪಕ್ಷ ತೊರೆದು ಹೋಗಬಾರದು ಎಂದು ಮನವಿ ಮಾಡಿದರು.
ಈ ವೇಳೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ 296 ಸದಸ್ಯರಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು.