ಚಾಮರಾಜನಗರ: ಕೊರೊನಾ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಜಾರಿಗೊಳಿಸಿದ್ದ ಸಂಜೆ 4 ರಿಂದ ಬೆಳಗ್ಗೆ 6 ವರೆಗೆ ಲಾಕ್ಡೌನ್ನನ್ನು ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ತೆರವುಗೊಳಿಸಿ ಆದೇಶಿಸಿದ್ದಾರೆ.
ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಲಾಕ್ಡೌನ್ ಮತ್ತು ಈಗಾಗಲೇ ಆದೇಶಿಸಿದ್ದ ಭಾನುವಾರ ಕರ್ಫ್ಯೂವನ್ನು ತೆರವುಗೊಳಿಸಿ ಸಾಮಾಜಿಕ ಅಂತರ, ಎಚ್ಚರಿಕೆಯಿಂದ ಜನರು ವರ್ತಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಹೋಂ ಕ್ವಾರಂಟೈನ್ ನಿಗಾವಣೆಯಲ್ಲಿರಬೇಕಾದವರು ನಿಗದಿತ ಅವಧಿಯ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಎಫ್ಐಆರ್ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.
ವಾರದ ಎಲ್ಲಾ ದಿನವೂ ದರ್ಶನ: ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಇನ್ನುಂದೆ ವಾರದ ಎಲ್ಲಾ ದಿನಗಳಲ್ಲೂ ತೆರೆದಿರಲಾಗುತ್ತದೆ ಶ್ರೀಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಅನ್ಲಾಕ್ 3.0 ಜಾರಿಯಾಗಿರುವುದರಿಂದ ಭಕ್ತಾದಿಗಳಿಗೆ ಭಾನುವಾರವೂ ಮಾದಪ್ಪನ ದರ್ಶನ ಇರಲಿದೆ. ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ದರ್ಶನ ಪಡೆಯಬಹುದಾಗಿದ್ದು, ವಾಸ್ತವ್ಯ ಹೂಡಲು ಅವಕಾಶವಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.