ಚಾಮರಾಜನಗರ: ನರೇಗಾ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗೆ ಬಿಲ್ ಪಾವತಿ ಮಾಡಲು ಲಂಚ ಸ್ವೀಕರಿಸುತ್ತಿದ್ದಾಗ ಇಂಜಿನಿಯರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.
ಚಾಮರಾಜನಗರ ತಾಲೂಕು ಪಂಚಾಯತ್ನಲ್ಲಿ ನರೇಗಾ ಯೋಜನೆಯಡಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವರಾಜ್ ಬಲೆಗೆ ಬಿದ್ದ ಆರೋಪಿ. ಚಾಮರಾಜನಗರ ತಾಲೂಕಿನ ದೊಡ್ಡಮೋಳೆ, ಹರದನಹಳ್ಳಿ, ಅಮಚವಾಡಿ, ಹೊನ್ನಹಳ್ಳಿ, ಅರಕಲವಾಡಿ, ಯರಗನಹಳ್ಳಿ ಗ್ರಾಮಪಂಚಾಯಿತಿಗಳಲ್ಲಿ ಆರೋಪಿಗೆ ಉದ್ಯೋಗ ಖಾತ್ರಿ ಉಸ್ತುವಾರಿ ನೀಡಲಾಗಿತ್ತು.
ಯರಗನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಯಣಗುಂಬ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಂಜುನಾಥ್ ಎಂಬುವರು ರಸ್ತೆ ನಿರ್ಮಾಣ ಕಾಮಗಾರಿ ನಡೆಸಿದ್ದರು. ಈ ಕಾಮಗಾರಿಯ ಬಿಲ್ ಪಾವತಿಗೆ ಎಂಬಿ ಬರೆಯಲು ಇಂಜಿನಿಯರ್ ಶಿವರಾಜ್ ಮಂಜುನಾಥ್ ಎಂಬವರಿಂದ 20 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಮಂಜುನಾಥ್ ಚಾಮರಾಜನಗರದ ಎಸಿಬಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಂಜಿನಿಯರ್ ಶಿವರಾಜ್ ಅವರನ್ನು ಗುರುವಾರ ಸಂಜೆ ಚಾಮರಾಜನಗರದ ಫಾರೆಸ್ಟ್ ನರ್ಸರಿ ಬಳಿ ಇರುವ ಖಾಸಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ಮಂಜುನಾಥ್ ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಗಸ್ಟ್ 14ರಿಂದ ಈವರೆಗೆ ಅಫ್ಘಾನಿಸ್ತಾನದಿಂದ 1 ಲಕ್ಷ ಜನರ ಸ್ಥಳಾಂತರ: ಶ್ವೇತಭವನ