ಚಾಮರಾಜನಗರ: ವಿಷಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹಾದೇವಸ್ವಾಮಿ, ಮಠದ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ಕೊಳ್ಳೇಗಾಲದ ಸಾಮಾಜಿಕ ಕಾರ್ಯಕರ್ತ ದಶರಥ ಎಂಬವರು ಆರ್ಟಿಐ ಅರ್ಜಿ ಸಲ್ಲಿಸಿ ಪಡೆದ ಮಾಹಿತಿಯಿಂದ ವಿಷಯ ಬೆಳಕಿಗೆ ಬಂದಿದ್ದು, ಹೇಗಾದರೂ ಮಾಡಿ ಜಾಮೀನು ಪಡೆದೇ ತೀರಬೇಕೆಂದು ಹವಣಿಸುತ್ತಿರುವ, ಇಮ್ಮಡಿ ಸ್ವಾಮಿ ಹಣ ಹೊಂದಿಕೆಗಾಗಿ ಮಠದ ಆಸ್ತಿಯನ್ನು ಗುಳುಂ ಮಾಡಿದ್ದಾರೆ ಎನ್ನಲಾಗಿದೆ.
1997ರಲ್ಲಿ ಸಾಲೂರು ಮಠದ ಮಹದೇಶ್ವರ ಕೃಪಾ ವಿದ್ಯಾಸಂಸ್ಥೆ ಹೆಸರಿನಲ್ಲಿ ಕೊಳ್ಳೇಗಾಲ ತಾಲೂಕಿನ ಕಸಬಾ ಹೋಬಳಿಯ ಲಿಂಗಣಾಪುರ ಸರ್ವೇ ನಂ 203ರಲ್ಲಿನ 2 ಎಕರೆ 44 ಸೆಂಟ್ ಜಮೀನನ್ನು ಕಳೆದ ಮೇ 19 ರಂದು ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೋಟಿ ರೂ.ಬೆಲೆ ಬಾಳುವ ಆಸ್ತಿಯನ್ನು ಜೈಲಲ್ಲಿದ್ದುಕೊಂಡೇ ಪರಭಾರೆ ಮಾಡಿಕೊಂಡಿರುವ ಇಮ್ಮಡಿ ಸ್ವಾಮಿಯೊಂದಿಗೆ ಕೆಲ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗುರುತರ ಆರೋಪ ಹೊತ್ತಿರುವ ಸ್ವಾಮಿಗೆ ಖಾತೆಯನ್ನು ದಿಢೀರನೇ ಮಾಡಿಕೊಟ್ಟಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಖಾತೆಯನ್ನು ರದ್ದುಪಡಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿದೆ.