ಚಾಮರಾಜನಗರ: ಒಂಟಿ ಸಲಗ ಜಮೀನಿಗೆ ಲಗ್ಗೆ ಇಟ್ಟರೇ ಬೆಳೆ ಸ್ಥಿತಿ ಅಯೋಮಯ. ಸುಮಾರು 40-50 ಆನೆಗಳ ಹಿಂಡು ನಿತ್ಯ ಇಲ್ಲಿನ ಜಮೀನುಗಳಿಗೆ ನುಗ್ಗುತ್ತಿದ್ದು ಇತ್ತ ಕೈಗೆ ಬಂದ ಬೆಳೆಯೂ ಉಳಿಸಿಕೊಳ್ಳಲಾಗದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಹೌದು... ಚಾಮರಾಜನಗರ ತಾಲೂಕಿನ ಅರಕಲವಾಡಿ, ಹೊನ್ನಹಳ್ಳಿ, ಹೊನ್ನಹಳ್ಳಿ ಹುಂಡಿ, ವಡ್ಗಲ್ಪುರ ಸೇರಿದಂತೆ ಕಾಡಂಚಿನ ಗ್ರಾಮಗಳಿಗೆ ತಮಿಳುನಾಡು ಭಾಗದಿಂದ ಗಜಪಡೆ ನಿತ್ಯ ದಾಂಗುಡಿ ಇಡುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ತೆಂಗು, ಬಾಳೆ ಸೇರಿದಂತೆ ಬೆಳೆದಿದ್ದೆಲ್ಲ ನಾಶವಾಗುತ್ತಿದೆ.
ತಮಿಳುನಾಡು ಕಾಡಿನಿಂದ ನುಗ್ಗವು ಆನೆಗಳು: ಚಾಮರಾಜನಗರ ತಾಲೂಕಿನ ಅರಕಲವಾಡಿ ಸುತ್ತಲಿನ ಗ್ರಾಮಗಳು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡಲಿದ್ದು, ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಗಡಿಭಾಗದಲ್ಲಿದೆ. ಆನೆ ಕಂದಕ, ರೈಲ್ವೆ ಕಂಬಿ ತಡೆಗೋಡೆ ಇಲ್ಲದಿರುವ ಪರಿಣಾಮ ತಮಿಳುನಾಡು ಕಾಡಿನಿಂದ ರಾಜ್ಯದ ಜಮೀನುಗಳಿಗೆ ಸುಮಾರು 40 - 50 ಆನೆಗಳ ಗುಂಪು ದಾಂಗುಡಿ ಇಟ್ಟು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಆನೆ ಕಾಟ ತಡೆಗೆ ಅರಣ್ಯ ಇಲಾಖೆ ಸುಮ್ಮನೆ: ತಮಿಳುನಾಡು ಅರಣ್ಯ ಇಲಾಖೆಯೊಟ್ಟಿಗೆ ರಾಜ್ಯದ ಅಧಿಕಾರಿಗಳು ಆನೆ ಕಾಟ ತಡೆಗೆ ಸಂಪರ್ಕ ಸಾಧಿಸದಿರುವುದು. ನಿರಂತರ ಪಾಟ್ರೋಲಿಂಗ್ ಮಾಡದಿರುವುದು. ಆನೆ ಕಾಟ ತಡೆ ನಿರ್ವಹಣೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕೊರತೆ ಜನರನ್ನು ಹೈರಾಣಾಗಿಸಿದೆ. ಈ ನಡುವೆ ಸರ್ಕಾರ ಕೊಡುತ್ತಿರುವ ಪರಿಹಾರದ ಮೊತ್ತವೂ ಯಾವುದಕ್ಕೂ ಬೇಡವಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ: ಚಾಮರಾಜನಗರ ತಹಿಸೀಲ್ದಾರ್ ಬಸವರಾಜು ಹಾಗೂ ಬಿಆರ್ಟಿ ಅಧಿಕಾರಿಗಳ ವಿರುದ್ಧ ವಡ್ಗಲ್ ಪುರದ ಗ್ರಾಮಸ್ಥರು ಆರೋಪಿಸಿದ ಘಟನೆ ಮಂಗಳವಾರ ನಡೆದಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ, ಗ್ರಾಮ ವಾಸ್ತವ್ಯದಲ್ಲಿ ವಿಚಾರ ಪ್ರಸ್ತಾಪಿಸಿ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗದಿದ್ದರಿಂದ ರೈತರು ಆಕ್ರೋಶ ಹೊರಚೆಲ್ಲಿದ್ದಾರೆ.
ಬೆಳೆಗೆ ಸಮರ್ಪಕ ಪರಿಹಾರಕ್ಕೆ ಆಗ್ರಹ: ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾಡಾನೆ ದಾಳಿ ಪ್ರದೇಶಗಳಿಗೆ ಭೇಟಿಯಿತ್ತು ಮಾತನಾಡಿ, ತಮಿಳುನಾಡು ಅರಣ್ಯಪ್ರದೇಶದಿಂದ ಬರುವ ಕಾಡಾನೆಗಳು ಈ ಭಾಗದ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.
ತಮಿಳುನಾಡು ಅರಣ್ಯ ಪ್ರದೇಶದಿಂದ ಆನೆಗಳು ಬಾರದಂತೆ ಜಮೀನಿಗೆ ಗಸ್ತು ನಡೆಸಬೇಕೆಂದು ಸೂಚನೆ ನೀಡಿದ್ದಾರೆ. ಆನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು. ಆನೆ ಸೇರಿದಂತೆ ಇತರೆ ಪ್ರಾಣಿಗಳ ಹಾವಳಿಯನ್ನು ತಡೆಯಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಯೋಜನಕ್ಕೆ ಬಾರದ ಅಲ್ಪಪರಿಹಾರ: ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದ ಬಳಿಕ ಆ ಖಾತೆ ಸಿಎಂ ಅವರ ಬಳಿ ಇರುವುದರಿಂದ ತ್ವರಿತ ಕ್ರಮಗಳು ಆಗುತ್ತಿಲ್ಲ. ಅತಿ ಹೆಚ್ಚು ಆನೆಗಳಿರುವ ಚಾಮರಾಜನಗರವನ್ನು ಆನೆ ಟಾಸ್ಕ್ ಫೋರ್ಸ್ ಯೋಜನೆಯಿಂದ ಕೈಬಿಡಲಾಗಿದೆ. ತೆಂಗು ನಾಶವಾದರೇ 400-500 ರೂ. ಪರಿಹಾರ ಕೊಡುತ್ತಿದ್ದು ಇದು ಯಾವುದಕ್ಕೂ ಸಾಲುತ್ತಿಲ್ಲ ಕನಿಷ್ಠ ಒಂದು ಸಸಿಗೆ 4000-5000 ಸಾವಿರ ರೂ. ಕೊಡಬೇಕು, 3-4 ವರ್ಷ ಸಾಕಿದ ಸಸಿಗಳಿಗೆ 500 ರೂ. ಕೊಟ್ಟರೇ ಪ್ರಯೋಜನವಿಲ್ಲ ಎಂದು ಒತ್ತಾಯಿಸಿದ್ದಾರೆ.
ಕಾಡಿನ ಪಕ್ಕ ಕಂದಾಯ ಭೂಮಿ: ಸತ್ಯಮಂಗಲಂ ಅರಣ್ಯ ಪ್ರದೇಶ ಕಾಡಿಗೆ ಹೊಂದಿಕೊಂಡಂತೆ ಕಂದಾಯ ಭೂಮಿ ಇದೆ. ಇದರಿಂದಾಗಿ, ಕಂದಕ ನಿರ್ಮಿಸಲು ಆಗುತ್ತಿಲ್ಲ, ರೈತರು ಒಪ್ಪಿಗೆ ಸೂಚಿಸಿ ಭೂಮಿ ಬಿಟ್ಟರೇ ಕಂದಕ ನಿರ್ಮಿಸಬಹುದು. ಈ ಬಗ್ಗೆ ಪಿಸಿಸಿಎಫ್ ಅವರಿಗೆ ತಿಳಿಸಿ ತಮಿಳುನಾಡು ಅರಣ್ಯ ಇಲಾಖೆ ಜತೆ ಪತ್ರ ವ್ಯವಹಾರ ನಡೆಸಲಾಗುವುದು ಎಂದು ಬಿಆರ್ಟಿ ನಿರ್ದೇಶಕಿ ದೀಪಾ ಕಾಂಟ್ರ್ಯಾಕ್ಟರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನಿಂದ ಕೇವಲ ನೀರಿನ ಕ್ಯಾತೆ ಅಷ್ಟೇ ಇಷ್ಟು ದಿನ ಅನುಭವಿಸಬೇಕಿತ್ತು. ಆದರೆ ಈಗ ಗಜ ಕಂಟಕವೂ ಸೃಷ್ಟಿಯಾಗಿದ್ದು ಕಾಡಂಚಿನ ರೈತರು ಕಂಗಾಲಾಗಿದ್ದಾರೆ.
ಇದನ್ನೂಓದಿ:ಚಳಿಗೆ ನಡುಗುತ್ತಿದೆ ಉತ್ತರ ಭಾರತ: ಈ ವಾರಾಂತ್ಯಕ್ಕೆ ಶೀತಗಾಳಿ ಪ್ರಮಾಣ ಕ್ಷೀಣಿಸುವ ಸಾಧ್ಯತೆ