ಚಾಮರಾಜನಗರ : ಕೊಳೆತ ಸ್ಥಿತಿಯಲ್ಲಿ ಗಂಡಾನೆಯೊಂದರ ಕಳೇಬರ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ನಾಗಣಾಪುರ ಬ್ಲಾಕ್-02 ಗಸ್ತಿನ ಹುಣಸೆತಾಳ ಕಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಪತ್ತೆಯಾದ ಗಂಡಾನೆಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದೆ.
ಕಾಡಾನೆ ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ವೇಳೆ ಕೊಳೆತ ವಾಸನೆ ಬಂದ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿದಾಗ ಆನೆ ಸಾವನ್ನಪ್ಪಿರುವುದು ಕಂಡುಬಂದಿದೆ.
ಸತ್ತ ಆನೆಯಿಂದ ಎರಡು ದಂತಗಳನ್ನು ಬೇರ್ಪಡಿಸಿ ಇಲಾಖೆ ವಶಪಡಿಸಿಕೊಂಡಿದೆ. ನಂತರ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ರಮೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಸೂಚನೆ ಮೇರೆಗೆ ಪಶು ವೈದ್ಯಾಧಿಕಾರಿ ಡಾ. ಮಿರ್ಜಾ ವಾಸೀಂ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ನಿಯಮಾನುಸಾರ ಕಳೇಬರವನ್ನು ಅರಣ್ಯ ಪ್ರದೇಶದಲ್ಲೇ ಬಿಡಲಾಯಿತು.
ರಾಮನಗರದಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು : ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಕಾಡಾನೆಯನ್ನು ಹೂತು ಹಾಕಿದ ಘಟನೆ ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ನಡೆದಿತ್ತು. ಜಿಲ್ಲೆಯ ಕನಕಪುರ ತಾಲೂಕಿನ ಸಂತೆಕೋಡಿಹಳ್ಳಿ ಗ್ರಾಮದಲ್ಲಿ ಸುಮಾರು 15 ವರ್ಷದ ಗಂಡಾನೆಯೊಂದು ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು. ಬಳಿಕ ಆನೆ ಮೃತಪಟ್ಟಿರುವುದನ್ನು ಕಂಡ ಆರೋಪಿಗಳು ಸ್ಥಳದಲ್ಲಿಯೇ ಗುಂಡಿ ತೆಗೆದು ಹೂತು ಹಾಕಿದ್ದರು. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸಂತೇಕೋಡಹಳ್ಳಿಯ ನಂಜೇಗೌಡ ಎಂಬವರಿಗೆ ಸೇರಿದ್ದ ಜಮೀನನ್ನು ಪಿಳ್ಳೇಗೌಡ ಎಂಬವರು ಬೋಗ್ಯಕ್ಕೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದರು. ಇಲ್ಲಿ ಆನೆಗಳ ಹಾವಳಿ ಹೆಚ್ಚಿದ ಕಾರಣ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ವಿದ್ಯುತ್ ಸ್ಫರ್ಶಿಸಿ ಆನೆ ಮೃತಪಟ್ಟಿದೆ. ಈ ವೇಳೆ ಅರಣ್ಯ ಇಲಾಖೆಗೆ ಸಿಕ್ಕಿಬೀಳುವ ಭಯದಲ್ಲಿ ಜೆಸಿಬಿ ಮೂಲಕ ಆನೆಯನ್ನು ಸ್ಥಳದಲ್ಲಿಯೇ ಹೂಳಿ, ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 8 ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿತ್ತು.
ಇದನ್ನೂ ಓದಿ : ಚಿಕ್ಕಮಗಳೂರು: ವ್ಯಕ್ತಿಯನ್ನು ತುಳಿದು ಸಾಯಿಸಿದ ಜಾಗದಲ್ಲೇ ಕಾಡಾನೆ ಸಾವು!