ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧಿಸಿದ್ದರೂ, ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಸ್ಥಳದಲ್ಲೇ ಮೃತಪಟ್ಟಿದೆ. ಕೇಸ್ ದಾಖಲಿಸಿರುವ ಪೊಲೀಸರು ಲಾರಿ, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಬಂಡೀಪುರ ಅಭಯಾರಣ್ಯದಲ್ಲಿ ಭಾರಿ ವಾಹನಗಳಿಗೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ನಿಯಮ ಮೀರಿ ಸಂರಕ್ಷಿತಾರಣ್ಯದಲ್ಲಿ ವೇಗವಾಗಿ ಬಂದ ಲಾರಿ ರಸ್ತೆ ಮಧ್ಯೆ ನಿಂತಿದ್ದ ಕಾಡಾನೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆದು ಕ್ರಮಕ್ಕೆ ಮುಂದಾಗಿದ್ದಾರೆ.
ಪರಿಸರವಾದಿಗಳ ಆಕ್ರೋಶ: ಇನ್ನು, ಹೆಣ್ಣಾನೆ ಸಾವಿಗೀಡಾಗಿದ್ದು ಪರಿಸರವಾದಿಗಳ ಕಣ್ಣು ಕೆಂಪಗಾಗಿಸಿದೆ. ನಿರ್ಬಂಧವಿದ್ದರೂ ಅರಣ್ಯದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.
ಓದಿ: ದಾರಿಯಲ್ಲಿ ಸಿಕ್ಕ ಲಕ್ಷಾಂತರ ಹಣದ ಕೇಸ್: ದುಡ್ಡು ತಮ್ಮದು ಅಂತಾ ಬಂದ ವಾರಸುದಾರರು ಮೂವರು!