ಚಾಮರಾಜನಗರ: ವನ್ಯಜೀವಿಗಳ ಚಲನ ವಲನ ಅರಿಯದೇ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ತಪ್ಪಲಿನಲ್ಲಿ ಜೀವವನ್ನೇ ತೆರುತ್ತಿದ್ದಾರೆ.
ಹೌದು, ಆನೆ ದಾಳಿಗೆ ಮಹಿಳೆಯೊಬ್ಬರು ಮೃತಪಡುವ ಮೂಲಕ 15 ದಿನದ ಅವಧಿಯಲ್ಲಿ ಆನೆ ದಾಳಿಗೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಇಂಡಿಗನತ್ತ ಗ್ರಾಮದ ಗೌರಮ್ಮ(45) ಮೃತ ಮಹಿಳೆಯಾಗಿದ್ದು ತೋಕೆರೆಯಲ್ಲಿನ ಮಾರಿಯಮ್ಮ ದೇಗುಲದಿಂದ ಹಿಂತಿರುಗುವಾಗ ಏಕಾಏಕಿ ಆನೆಯೊಂದು ಭಕ್ತೆಯನ್ನು ತುಳಿದುಹಾಕಿರುವ ಘಟನೆ ದಟ್ಟಾರಣ್ಯದಲ್ಲಿ ನಡೆದಿದೆ.
ಈ ಸಂಬಂಧ ಮಾತನಾಡಿದ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕೊಂಡಲು, ತಾಳಬೆಟ್ಟ ಮತ್ತು ನಾಗಮಲೆ ಹಾಗೂ ಇಂದು ತೋಕೆರೆಯಲ್ಲಿ ನಡೆದ ಆನೆ ದಾಳಿಯಿಂದ ಒಟ್ಟು ಮೂವರು ಮೃತಪಟ್ಟಿದ್ದಾರೆ. ಭಕ್ತರ ಅಜ್ಞಾನದ ಕೊರತೆಯಿಂದ, ಪ್ರಾಣಿಗಳ ಚಲನವಲನ ತಿಳಿಯದಿದ್ದರಿಂದಲೇ ಈ ಅವಘಡಗಳಾಗಿದ್ದು ಕಾಲುದಾರಿ ಮೂಲಕ ದೇಗುಲಗಳಿಗೆ ಭೇಟಿ ನೀಡುವ ಭಕ್ತರು ಇಲಾಖೆ ಮತ್ತು ಸ್ಥಳೀಯ ಜನರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬೇಕು ಎಂದರು.