ಚಾಮರಾಜನಗರ: ಸುತ್ತಮುತ್ತಲೆಲ್ಲಾ ಹಾಟ್ ಸ್ಪಾಟ್ ಆದರೂ ಗ್ರೀನ್ ಝೋನ್ನಲ್ಲೇ ಚಾಮರಾಜನಗರ ಇರಲು ಕಾರಣ ಜಿಲ್ಲಾಧಿಕಾರಿ ತೆಗೆದುಕೊಳ್ಳುತ್ತಿರುವ ಖಡಕ್ ತೀರ್ಮಾನಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊರೊನಾ ಯೋಧರ ಹಿಂದೆ ಸಾಕಷ್ಟು ವೈಯಕ್ತಿಕ ವ್ಯಥೆಗಳಿವೆ, ತಾಯಿ-ಮಕ್ಕಳು, ಪತಿ-ಪತ್ನಿ ಜೊತೆ ಕಾಲ ಕಳೆಯಲಾಗದ ಸಂಕಷ್ಟವಿದೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ನಿದರ್ಶನ.
ಹೌದು, ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಅವರು ಗಡಿಯನ್ನು ಬಿಗಿಗೊಳಿಸಿದ್ದು, ಹೋಮ್ ಕ್ವಾರಂಟೈನ್ನಲ್ಲಿದ್ದವರನ್ನು ಆಸ್ಪತ್ರೆ ಕ್ವಾರಂಟೈನ್ಗೆ ಸ್ಥಳಾಂತರಿಸಿದ್ದಾರೆ. ಈ ತಕ್ಷಣವೇ ತೆಗೆದುಕೊಂಡ ತೀರ್ಮಾನಗಳಿಂದ ಕೊರೊನಾ ಮುಕ್ತ ಚಾಮರಾಜನಗರವಾಗಲು ಟೊಂಕ ಕಟ್ಟಿರುವುದು ಎಲ್ಲರಿಗೂ ತಿಳಿದಿದೆ.
ಆದರೆ, ತಾಯಿ ಅನಾರೋಗ್ಯಕ್ಕೆ ತುತ್ತಾದರೂ ಮೈಸೂರಿಗೆ ತೆರಳಿ ನೋಡಲಾಗದೇ ಕೊರೊನಾ ಯೋಧರಾಗಿ ದುಡಿಯುತ್ತಿರುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ವಯೋಸಹಜದಿಂದ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಮೈಸೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮಾರ್ಚ್ 9ರಂದು ತೆರಳಿ ತಾಯಿ ಆರೋಗ್ಯ ವಿಚಾರಿಸಿ ಬಂದಿದ್ದ ರವಿ ಅವರು ಆ ಬಳಿಕ ಇನ್ನೊಮ್ಮೆ ಹೋಗಬೇಕೆನುವಷ್ಟರಲ್ಲಿ ಕೊರೊನಾ ಭೀತಿ ಆವರಿಸಿತು. ಜಿಲ್ಲೆಗೆ ಸೋಂಕು ತಗುಲದಂತೆ ವೈಯಕ್ತಿಕ ಜೀವನ ಬದಿಗೊತ್ತಿ ದುಡಿಯುತ್ತಿರುವ ಡಿಸಿ, ಅನಾರೋಗ್ಯ ಪೀಡಿತ ತಾಯಿಯ ಆರೈಕೆಯನ್ನು ಸಹೋದರಿಯ ಹೆಗಲಿಗೆ ವಹಿಸಿ, ತಾವು ಕೊರೊನಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಇನ್ನು, ಡಿಸಿ ಅವರ ಸೊಸೆ ಗರ್ಭಿಣಿಯಾಗಿದ್ದು ಅವರೊಂದಿಗೂ ಸಮಯ ಕಳೆಯಲಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮತ್ತು ಪರೀಕ್ಷೆ ಮಾಡಿಸುತ್ತಿರುವುದಾಗಿ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ತಾಯಿ ಮತ್ತು ಸೊಸೆಯ ಕ್ಷೇಮಪಾಲನೆ ಬದಿಗಿಟ್ಟು ಜಿಲ್ಲೆಯ ಜನರನ್ನು ಕೊರೊನಾದಿಂದ ರಕ್ಷಿಸಲು ದುಡಿಯುತ್ತಿರುವ ಜಿಲ್ಲಾಧಿಕಾರಿ ಕಾರ್ಯ ನಿಜಕ್ಕೂ ಮಾದರಿ ಮತ್ತು ಕಠಿಣ.