ಚಾಮರಾಜನಗರ: ಕೊರೊನಾ ಲಾಕ್ಡೌನ್ ತೆರವಾದ ಬಳಿಕ ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಚಾಮರಾಜನಗರ ಪೊಲೀಸರು ಕಣ್ಣಿಟ್ಟಿದ್ದು, 8 ತಿಂಗಳಿನಲ್ಲಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಕೇಸ್ ದಾಖಲಿಸಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಹೆಲ್ಮೆಟ್ ಧರಿಸದೇ ಸವಾರಿ ಸಂಬಂಧ 10,548 ಕೇಸ್ ದಾಖಲಿಸಿ 52,78,700 ರೂ. ದಂಡ ವಸೂಲಿ ಮಾಡಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ದಾಖಲಾದ ಕೇಸ್ಗಳ ಸಂಖ್ಯೆಯ ಮಾಹಿತಿಗಾಗಿ ಎಲ್ಲಾ ಠಾಣೆಗಳಿಗೆ ಮೆಮೊ ಕಳುಹಿಸಿದ್ದಾರೆ.
ಅಲ್ಲದೇ ವಿಥೌಟ್ ಹೆಲ್ಮೆಟ್ ಸಂಬಂಧಿಸಿದಂತಷ್ಟೇ ಪೊಲೀಸರು ಹೆಚ್ಚು ನಿಗಾ ಇಟ್ಟಿದ್ದು ಅತಿವೇಗ, ಹೈ ಬೀಮ್ ಲೈಟ್, ಕಾರಿನ ಸೀಟ್ ಬೆಲ್ಟ್ ಬಗ್ಗೆ ಗಮನ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಮಾಸ್ಕ್ ಜಾಗೃತಿ: ಕೊರೊನಾ ಲಾಕ್ಡೌನ್ ನಿರ್ಬಂಧ ತೆರವಾದ ಬಳಿಕ ಕೊರೊನಾ ಸೊಂಕಿತರ ಸಂಖ್ಯೆಯೂ ಹೆಚ್ಚಾಗಿದ್ದು, ಕೋವಿಡ್ ನಿಯಮಗಳ ಕಟ್ಟು ನಿಟ್ಟಿನ ಜಾರಿಗಾಗಿ ಪೊಲೀಸರು ಮಾಸ್ಕ್ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ದಂಡ ಕಟ್ಟಿ ಇಲ್ಲ ಮಾಸ್ಕ್ ಹಾಕಿ, ಆರೋಗ್ಯ ಕಾಪಾಡಿ ಎಂದು ಪೊಲೀಸರು ಜಿಲ್ಲಾ ಕೇಂದ್ರದ ವಿವಿಧ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ ಗಮನ ಸೆಳೆದಿದ್ದಾರೆ. ಜೊತೆಗೆ ಮಾಸ್ಕ್ ಇಲ್ಲದ ವಾಹನ ಚಾಲಕರು, ವ್ಯಾಪಾರಸ್ಥರು ಪಾದಾಚಾರಿಗಳಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನು, ನಗರಸಭೆ ಆಯುಕ್ತ ರಾಜಣ್ಣ ಪ್ರತ್ಯೇಕವಾಗಿ ಮಾಸ್ಕ್ ಹಾಕದವರಿಂದ 100 ರೂ.ದಂಡ ವಸೂಲಿ ಮಾಡುತ್ತಿದ್ದಾರೆ.