ಚಾಮರಾಜನಗರ: ವರನಟ ಡಾ.ರಾಜ್‍ಕುಮಾರ್ ಜನಿಸಿದ ಗಾಜನೂರಿನ ಹಳೆ ಮನೆಗೆ ಕಾಯಕಲ್ಪ ಸಿಗುತ್ತಿದ್ದು, ಈಗಾಗಲೇ ದುರಸ್ತಿ ಕಾರ್ಯ ಮುಗಿದಿದೆ. ಅದೇ ಮನೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟನೆಯ ಚಿತ್ರವೊಂದು ಗುರುವಾರ ಸೆಟ್ಟೇರುತ್ತಿದೆ.
ಪುನೀತ್ ಅಗಲಿಕೆ ಬಳಿಕ ಇದೇ ಮೊದಲ ಬಾರಿಗೆ ತವರೂರಿಗೆ ರಾಘವೇಂದ್ರ ರಾಜ್‍ಕುಮಾರ್ ಭೇಟಿ ಕೊಟ್ಟಿದ್ದು, ಸೋದರತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೇ ಹಳೆ ಮನೆ ದುರಸ್ತಿ ಕಾರ್ಯವನ್ನೆಲ್ಲಾ ಪರಿಶೀಲನೆ ನಡೆಸಿದರು.
ಈ ಮನೆ 150 ವರ್ಷದಷ್ಟು ಹಳೆಯದಾಗಿದ್ದು, ಬಹಳಷ್ಟು ಶಿಥಿಲಗೊಂಡಿತ್ತು. ಅಪ್ಪು ಆಸೆಯಂತೆ ಮನೆ ದುರಸ್ತಿ ಕಾರ್ಯ ನಡೆದಿದ್ದು, ನಾಳೆ ರಾಘವೇಂದ್ರ ರಾಜ್‍ಕುಮಾರ್ ಮತ್ತು ಕುಟುಂಬದವರು ಮನೆಯಲ್ಲಿ ವಿಶೇಷ ಪೂಜೆ ನಡೆಸಲಿದ್ದಾರೆ.
ಇದನ್ನೂ ಓದಿ: ಪುನೀತ್ ಪಿ.ಆರ್.ಕೆ ಬ್ಯಾನರ್ನಲ್ಲಿ ಅಭಿನಯಿಸಿರುವುದು ನನ್ನ ಸೌಭಾಗ್ಯ: ನಟಿ ಶರ್ಮಿತಾ ಗೌಡ
ರಾಘಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಖಡಕ್ ಹಳ್ಳಿ ಹುಡುಗರು ಎಂಬ ಚಿತ್ರ ನಾಳೆ ಸೆಟ್ಟೇರುತ್ತಿದ್ದು, ಸೋದರತ್ತೆ ನಾಗಮ್ಮ ಮುಹೂರ್ತ ಪೂಜೆ ನಡೆಸಲಿದ್ದಾರೆ. ಈ ಹಿಂದೆ ಗಾಜನೂರಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಎಂಬ ಎವರ್ ಗ್ರೀನ್ ಚಿತ್ರಗಳ ಚಿತ್ರೀಕರಣ ಮಾತ್ರ ಆಗಿತ್ತು. ಈಗ ಇದೇ ಮೊದಲ ಬಾರಿಗೆ ಮುಹೂರ್ತವೇ ಗಾಜನೂರಿನಲ್ಲಿ ನಡೆಯುತ್ತಿದೆ.