ಚಾಮರಾಜನಗರ: ಪೊಲೀಸ್ ಗಣಪನೆಂದೇ ಕರೆಯಲ್ಪಡುವ ಚಾಮರಾಜನಗರದ ದೊಡ್ಡ ಗಣಪತಿಯ ನಿಮಜ್ಜನ ಮೆರವಣಿಗೆ ಆರಂಭವಾಗಿದ್ದು, ಕಾಡಾ ಅಧ್ಯಕ್ಷ ನಿಜಗುಣರಾಜು, ಶಾಸಕ ನಿರಂಜನಕುಮಾರ್, ಎಸ್ಪಿ ಶಿವಕುಮಾರ ಗಣೇಶನಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಚಂಡೆ ಮದ್ದಳೆ, ಬ್ರಾಸ್ ಬ್ಯಾಂಡ್, ಗಾರುಡಿ ಗೊಂಬೆ, ನವಿಲಿನ ಕುಣಿತ ಸೇರಿದಂತೆ 20 ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದು ಸಾವಿರಾರು ಹಿಂದೂಪರ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಮೆರವಣಿಗೆಯುದ್ದಕ್ಕೂ ಭಾರೀ ಪೊಲೀಸ್ ಭದ್ರತೆ ಕೈಗೊಂಡಿದ್ದು ಒಬ್ಬರು ಎಸ್‌ಪಿ, ಒಬ್ಬರು ಎಎಸ್‌ಪಿ, ಐವರು ಡಿವೈಎಸ್‌ಪಿ, 25 ಇನ್‌ಸ್ಪೆಕ್ಟರ್‌ಗಳು, 40 ಸಬ್ ಇನ್‌ಸ್ಪೆಕ್ಟರ್‌ಗಳು, ಕಮಾಂಡೊ ಪಡೆ, 5 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ 800 ರಿಂದ 1000 ಸಿಬ್ಬಂದಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮೆರವಣಿಗೆ ತೆರಳುವ ಎಲ್ಲಾ ಸ್ಥಳಗಳಲ್ಲೂ ಶ್ವಾನದಳ ಮತ್ತು ಬಾಂಬ್ ಶೋಧ ಪಡೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕೈಗೊಂಡಿದ್ದು ವೀಡಿಯೋ ಕ್ಯಾಮರಾ, ಡ್ರೋಣ್ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿದೆ.
ದಲಿತರ ಬೀದಿಗೆ ಮೊದಲು ಗಣಪನ ಮೆರವಣಿಗೆ ತೆರಳಿ ಪ್ರಥಮ ಪೂಜೆ ಸ್ವೀಕರಿಸುವುದು ದೊಡ್ಡ ಗಣಪತಿ ಮೆರವಣಿಗೆಯ ವಿಶಿಷ್ಟತೆಯಾಗಿದೆ. ಸಾವರ್ಕರ್ ಟೀ ಶರ್ಟ್, ಸಾವರ್ಕರ್ ಧ್ವಜ ಹೆಚ್ಚು ಈ ಬಾರಿ ಮೆರವಣಿಯಲ್ಲಿ ಕಂಡು ಬಂದಿದ್ದು ಪೊಲೀಸ್ ಅಧಿಕಾರಿಗಳಿಗೆ ಕೇಸರಿ ಶಾಲು ಹೊದಿಸಿ ಬರಮಾಡಿಕೊಂಡಿದ್ದು ಗಮನ ಸೆಳೆಯಿತು.
ಇದನ್ನೂ ಓದಿ: ಚಾಮರಾಜನಗರ: ತ್ರಿವಳಿ ಗಂಡು ಕರುಗಳಿಗೆ ಜನ್ಮ ಕೊಟ್ಟ ಹಸು