ಚಾಮರಾಜನಗರ:ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವ ಕುರಿತು ಕಾಂಗ್ರೆಸ್ ಜಿಲ್ಲಾ ಘಟಕ ಜಿಸಿ ಪ್ರತಿಭಟನೆ ತೀವ್ರಗೊಳಿಸಿದ್ದು, ಕೊಳ್ಳೇಗಾಲದಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಮಾಜಿ ಶಾಸಕ ಬಾಲರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್ ಮತ್ತಿತರರು ರಸ್ತೆಮೇಲೆ ಮಲಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ, ಸುದ್ದಿಗಾರರೊಂದಿಗೆ ಮಾಜಿ ಶಾಸಕ ಬಾಲರಾಜು ಮಾತನಾಡಿ, ಕಾಂಗ್ರೆಸ್ ಅನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಪಕ್ಷ ಕಟ್ಟುವ ಕಟ್ಟಾಳುಗಳನ್ನು ರಾಜಕೀಯವಾಗಿ ಮುಗಿಸಲು ಡಿಕೆಶಿ ಅವರನ್ನು ಬಂಧಿಸಲಾಗಿದೆ. ಹಿಂಬದಿಯಿಂದ ಚೂರಿ ಹಾಕುವ ಕೆಲಸವನ್ನು ಇಡಿ ಮಾಡಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಹೀನಾಯ ಪರಿಸ್ಥಿತಿಯನ್ನು ಉಂಟು ಮಾಡುತ್ತಿದೆ. ನಮ್ಮ ಪಕ್ಷ ಮುಗಿಸುವ ಕೆಲಸ ಮಾಡುತ್ತಿದ್ದು, ಫೀನಿಕ್ಸ್ನಂತೆ ಎದ್ದುಬಂದು ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.