ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕಸಾಪ ಚುನಾವಣೆಗೆ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಬಿ.ಎಸ್.ವಿನಯ್ ನಾಮಪತ್ರವೇ ತಿರಸ್ಕೃತಗೊಳ್ಳುವ ಮೂಲಕ ಸ್ಪರ್ಧೆ ಮತ್ತೊಂದು ತಿರುವು ಪಡೆದಿದೆ.
ಏಕಕಾಲಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಮಿಳುನಾಡು ಗಡಿನಾಡ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದು ಜೊತೆಗೆ ಎರಡು ಕಡೆ ಸದಸ್ಯತ್ವ ಹೊಂದಿರುವುದು ಕಸಾಪ ನಿಬಂಧನೆ ಹಾಗೂ 1950ರ ಪ್ರಜಾಪ್ರತಿನಿಧಿ ಕಾಯ್ದೆ ನಿಯಮಕ್ಕೆ ವಿರುದ್ಧವಾಗಿರುವುದರಿಂದ ವಿನಯ್ ಅವರ ಎರಡೂ ನಾಮಪತ್ರ ತಿರಸ್ಕೃತಗೊಂಡಿದೆ.
ಇನ್ನು ಮತ್ತೊಂದಡೆ, ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದ ಹಿರಿಯ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.
ಸೋಮವಾರದವರೆಗೆ ನಾಮಪತ್ರ ವಾಪಾಸ್ ಪಡೆಯಲು ಅವಕಾಶವಿದ್ದು ನಾಮಪತ್ರ ಸಲ್ಲಿಸಿರುವ 7 ಮಂದಿಯಲ್ಲಿ ಕಣದಲ್ಲಿರುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ, ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಸಾಹಿತಿ ಮತ್ತು ಪತ್ರಕರ್ತ ನಾಗೇಶ್ ಸೋಸ್ಲೆ, ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷಗಾದಿಗೆ ಸ್ಪರ್ಧಿಸಿರುವ ಸ್ನೇಹಾ, ಹೋರಾಟಗಾರ ಮಾದಾಪುರ ರವಿಕುಮಾರ್ ಗೆಲ್ಲುವ ಉಮೇದಿನಲ್ಲಿದ್ದಾರೆ.