ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿದ ಬಳಿಕ ಸ್ಥಗಿತಗೊಂಡಿದ್ದ ಗಣಿಗಾರಿಕೆ ಜಿಲ್ಲೆಯ ವಿವಿಧೆಡೆ ಮತ್ತೆ ಆರಂಭವಾಗಿದ್ದು, ಸರಿಸುಮಾರು 70ಕ್ಕೂ ಹೆಚ್ಚು ಗಣಿಗಳು ಕಾರ್ಯಚಟುವಟಿಕೆ ಆರಂಭಿಸಿದೆ.
ಗಣಿಗಾರಿಕೆ ಆರಂಭಿಸುವುದಕ್ಕೂ ಮುನ್ನ ಕ್ವಾರಿ ಮಾಲೀಕರು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚಿಸಿದ್ದರು. ಇದಕ್ಕಾಗಿ ಎರಡು ತಿಂಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಇದುವರೆಗೆ 70 ಕ್ವಾರಿ ಮಾಲೀಕರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಪ್ರಮಾಣಪತ್ರ ಸಲ್ಲಿಸಿದವರಿಗೆ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅವಕಾಶ ನೀಡಿದೆ.
ಪ್ರಮಾಣ ಪತ್ರ ಸಲ್ಲಿಸಿದವರು ಗಣಿಗಾರಿಕೆ ನಡೆಸಬಹುದು. ಆದರೆ, ಕ್ವಾರಿ ಪ್ರದೇಶದಲ್ಲಾಗಿರುವ ನಿಯಮಗಳ ಉಲ್ಲಂಘನೆಗಳನ್ನು ಸರಿಪಡಿಸಬೇಕು. ಇದಕ್ಕೆ ಎರಡು ತಿಂಗಳು ಕಾಲಾವಕಾಶ ಇದೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಗಣಿಗಳಿಗೆ ತೆರಳಿ ಪರಿಶೀಲನೆ ನಡೆಸುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಕೆ.ಎಂ.ನಂಜುಂಡಸ್ವಾಮಿ ತಿಳಿಸಿದ್ದಾರೆ.
ಗಣಿಗಳ ಪರಿಶೀಲನೆಗೂ ಮುನ್ನವೇ ಗಣಿಗಾರಿಕೆ ನಡೆಸಲು ಅವಕಾಶ ನೀಡಿರುವುದಕ್ಕೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಮಾಣ ಪತ್ರ ಸಲ್ಲಿಸಿದ ನಂತರ, ಜಿಲ್ಲಾ ಮಟ್ಟದ ಗಣಿ ಕಾರ್ಯಪಡೆ ಸಮಿತಿಯು ಪರಿಶೀಲನೆ ನಡೆಸಿ ಮಾಲೀಕರು ನಿಯಮ ಪಾಲನೆ ಮಾಡುತ್ತಾರೆ ಎಂಬುದನ್ನು ಖಚಿತ ಪಡಿಸಿದ ನಂತರವಷ್ಟೇ ಗಣಿಗಾರಿಕೆಗೆ ಅವಕಾಶ ಕೊಡಲಾಗುವುದು ಎಂದು ಉಸ್ತುವಾರಿ ಸಚಿವರು ಹೇಳಿದ್ದರು. ಆದರೆ, ಈಗ ಅಧಿಕೃತವಾಗಿ ಅನುಮತಿ ನೀಡುವುದಕ್ಕೂ ಮೊದಲೇ ಕ್ವಾರಿ ಚಟುವಟಿಕೆ ಶುರುವಾಗಿದೆ ಎಂದು ಅಸಮಾಧಾನವನ್ನೂ ಹೊರಹಾಕಿದ್ದಾರೆ.
ಸಚಿವರು ಹೇಳಿದ್ದೇನು?: ಈ ತಿಂಗಳ 18ರಂದು ಕೊಳ್ಳೇಗಾಲದಲ್ಲಿ ಅಧಿಕಾರಿಗಳು ಹಾಗೂ ಗಣಿ ಮಾಲೀಕರೊಂದಿಗೆ ಸಭೆ ನಡೆಸಿದ್ದ ಉಸ್ತುವಾರಿ ಸಚಿವ ವಿ.ಸೋಮಣ್ಣ, ತಾವು ನಡೆಸುತ್ತಿರುವ ಗಣಿಗಾರಿಕೆ ಹಾಗೂ ನಿಯಮಗಳನ್ನು ಪಾಲಿಸಿರುವ ಬಗ್ಗೆ ಗಣಿಗಳ ಮಾಲೀಕರು ಎರಡು ತಿಂಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಹಸಿರು ಇಂಧನ ಬಳಕೆ ಉತ್ತೇಜಿಸುವ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಭೆ ಅಸ್ತು!
ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಕಾರ್ಯಪಡೆಯು ಪ್ರಮಾಣಪತ್ರ ಪರಿಶೀಲಿಸಿ, ತೃಪ್ತಿಕರವಾಗಿದ್ದರೆ ತಕ್ಷಣವೇ ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಲಿದೆ. ಒಂದು ವೇಳೆ, ಒತ್ತುವರಿ ಸೇರಿದಂತೆ ಇತರ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಮುಂದೆ ಏನು ಮಾಡಬೇಕು? ಎಂದು ಮುಖ್ಯಮಂತ್ರಿ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು' ಎಂದಿದ್ದರು. ಆದರೆ, ತಪಸಾಣೆ, ಪರಿಶೀಲನೆಗೂ ಮುನ್ನವೇ ಅಫಿಡವಿಟ್ವೊಂದನ್ನು ಪಡೆದು ಗಣಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಪರ್ಯಾಸವೇ ಆಗಿದೆ.
ತಿಂಗಳಾಗುತ್ತ ಬಂದರೂ ಸಿಗದ ಪ್ರಮುಖ ಆರೋಪಿ: ಮಡಹಳ್ಳಿ ಬಿಳಿಕಲ್ಲು ಕ್ವಾರಿ ಕುಸಿದು ಮೂವರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಪ್ರಮುಖ ಆರೋಪಿಯನ್ನು ಬಂಧಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿ ಬಂದಿದೆ. ಮಡಹಳ್ಳಿ ಬಿಳಿಕಲ್ಲು ಕ್ವಾರಿಯನ್ನು ಉಪ ಗುತ್ತಿಗೆ ಪಡೆದಿದ್ದ, ಪ್ರಕರಣದ ಎರಡನೇ ಆರೋಪಿ ಕೇರಳದ ಹಕೀಂ ಬಂಧನ ಇನ್ನೂ ಆಗದಿರುವುದು ವಿಪರ್ಯಾಸವೇ ಆಗಿದೆ.