ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ಸಚಿವ ವಿ. ಸೋಮಣ್ಣ ಅವರಿಗೆ ಕೊಟ್ಟಿರುವುದಕ್ಕೆ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಚಾಮರಾಜನಗರ ಜಿಲ್ಲಾ ಬಿಜೆಪಿ ಘಟಕದ ವಕ್ತಾರ ಅಯ್ಯನಪುರ ಶಿವಕುಮಾರ್ ಹಾಗೂ ಇನ್ನಿತರ ಬಿಜೆಪಿ ಮುಖಂಡರು ಈ ವಿಚಾರವಾಗಿ ಮಾಧ್ಯಮಗೋಷ್ಟಿ ನಡೆಸಿದರು.
ಸಚಿವ ವಿ. ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯಿಂದ ಟಿಕೆಟ್ ಏನಾದರೂ ಕೊಟ್ಟರೇ 'ಗೋ ಬ್ಯಾಕ್' ಚಳವಳಿ ನಡೆಸಲಾಗುವುದು. ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ಅವರಿಗೆ ನೀಡಬಾರದು ಎಂದು ಈ ಮುಖಂಡರು ಒತ್ತಾಯಿಸಿರುವುದು ಜಿಲ್ಲಾ ಬಿಜೆಪಿಯಲ್ಲಿನ ಭಿನ್ನಮತವನ್ನು ಬಹಿರಂಗಪಡಿಸಿದೆ.
ಸಚಿವ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆದ ಬಳಿಕ ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ, ಅವರಿಂದ ಪಕ್ಷಕ್ಕೆ ಯಾವುದೇ ಅನೂಕೂಲವಾಗಿಲ್ಲ. ಇದನ್ನೆಲ್ಲ ಗಮನಿಸಿ ಚುನಾವಣಾ ಉಸ್ತುವಾರಿ ಕೊಡಬಾರದು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಸೋಮಣ್ಣ ಅವರು ಹನೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಾಡಿ ಹೊಗಳುತ್ತಾರೆ, ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಕ್ಕೆ ಗೈರಾಗಿ ಪಕ್ಷದ ಸಂಘಟನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅಯ್ಯನಪುರ ಶಿವಕುಮಾರ್ ಅವರು ವಿ. ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಸ್ತುವಾರಿಯಾಗಿ ವಿಜಯೇಂದ್ರ ಅವರನ್ನು ನೇಮಿಸಬೇಕು: ಇದೇ ವೇಳೆ, ಚಾಮರಾಜನಗರ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರನ್ನು ನೇಮಿಸಬೇಕು, ಯಡಿಯೂರಪ್ಪ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಾರ ನಡೆಸಬೇಕು, ಚಾಮರಾಜನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ ಎಂದು ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ.
ಅಮಿತ್ ಶಾ ಕೆಲ ಜವಾಬ್ದಾರಿ ಕೊಟ್ಟಿದ್ದಾರೆ.. ಮತ್ತೊಂದೆಡೆ ಇಂದು ಈ ಚವಿಚಾರ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ವಿ ಸೋಮಣ್ಣ, ನನಗೆ ಗೋವಿಂದರಾನಗರ ಕ್ಷೇತ್ರ ಇದೆ. ನಾನು ಎಲ್ಲಾದರೂ ಹೋಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂದರೆ ಯಾರೂ ಬೇಡ ಅನ್ನೋದಿಲ್ಲ, ಹನೂರಿನಲ್ಲಿ ನಿಲ್ಲಲು ಮುಂದಾದರೂ ವಿರೋಧಿಸಲ್ಲ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ನನ್ನನ್ನು ಕರೆದು ಮಾತನಾಡಿದ್ದರು. ಈ ಸಂದರ್ಭದಲ್ಲಿ ಕೆಲ ಜವಬ್ದಾರಿಗಳನ್ನು ಕೊಟ್ಟಿದ್ದಾರೆ. ಚಾಮರಾಜನಗರಕ್ಕೆ ಹೋಗಿ ಅಲ್ಲಿ ಕೆಲಸ ಶುರು ಮಾಡಿ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಗಡಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವಿಗಾಗಿ ನಾನು ಅಲ್ಲಿ ಕೆಲಸ ಮಾಡುತ್ತೇನೆ. ಹನೂರಿನಲ್ಲಿ ನಾನು ಹಿಂದೆಯೇ ಸೆಟಲ್ ಆಗಿದ್ದೆ ಎಂದಿದ್ದರು.
ನನಗೆ ಅನಿಸಿದ್ದನ್ನು ನಾನು ಮಾಡುತ್ತೇನೆ. 45 ವರ್ಷಗಳ ಕಾಲ ರಾಜಕಾರಣದಲ್ಲಿ ಮಣ್ಣು ಹೊತ್ತಿದ್ದೇನೆ. ಸ್ವತಂತ್ರವಾಗಿ ಬೆಂಗಳೂರಲ್ಲಿ ಗೆದ್ದಿದ್ದೇನೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷದಿಂದ ನಿಂತು ನಾನು ಗೆದ್ದಿದ್ದೇನೆ. ನನಗೆ ಇನ್ನು ಏನೂ ಆಗಬೇಕಾಗಿಲ್ಲ. ಇನ್ನೊಬ್ಬರನ್ನು ತೃಪ್ತಿ ಪಡಿಸುವ ಅಗತ್ಯ ಇಲ್ಲ, ನನಗೆ ಅನಿಸಿದ್ದನ್ನು ನಾನು ಮಾಡಿದ್ದೇನೆ ಎಂದು ಸಚಿವ ಸೋಮಣ್ಣ ಇದೇ ಸಂದರ್ಭದಲ್ಲಿ ಹೇಳಿದ್ದರು.
ಇದನ್ನೂ ಓದಿ : ನನಗೆ ಗೋವಿಂದರಾಜನಗರ ಇದೆ, ಮತ್ತೊಂದು ಕ್ಷೇತ್ರದ ಅಗತ್ಯ ಇಲ್ಲ: ವಿ.ಸೋಮಣ್ಣ