ಚಾಮರಾಜನಗರ: ಕಳೆದ ಡಿಸೆಂಬರ್‌ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತೆ ಭಕ್ತರು ಗೋಳಾಡಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕಿಚ್ಚುಗುತ್ತಿ ಮಾರಮ್ಮನ ದೇಗುಲಕ್ಕೆ ಭೇಟಿಯಿತ್ತ ವೇಳೆ ಮಹಿಳೆಯರು ದೇವರ ಮುಂದೆ ಗೋಳಾಡಿ, ತಾಯಿಗೆ ಪೂಜೆ-ಪುನಸ್ಕಾರ, ಅಭಿಷೇಕವಾಗಿ ಒಂದು ವರ್ಷ ಕಳೆದಿದೆ. ಕೇಳಿದ್ದನ್ನೆಲ್ಲಾ ನೀಡುತ್ತಿದ್ದ ರೋಗ-ರುಜಿನ ಪರಿಹರಿಸುತ್ತಿದ್ದ ತಾಯಿಯನ್ನು ಕಾಣಲು ಬಿಡಿ ಎಂದು ಸಚಿವರನ್ನು ಭಕ್ತರು ಒತ್ತಾಯಿಸಿದರು.
ಭಕ್ತರೆಲ್ಲಾ ಆಗಮಿಸಿ ನಿರಾಸೆ ಮುಖ ಹೊತ್ತು ತೆರಳುತ್ತಿದ್ದಾರೆ. ಬಾಯಿ ಬೀಗ, ಹರಕೆ ಬಲಿ, ಮುಡಿ ಹರಕೆಗಳನ್ನು ತೀರಿಸಲಾಗದೇ ಕಾಯುತ್ತಿದ್ದಾರೆ. ಅಮ್ಮನ ಪೂಜೆ ನಡೆದರೆ ಸಾಕೆಂಬಂತಾಗಿದ್ದು, ದೇಗುಲದ ಬಾಗಿಲು ತೆಗೆದರೆ ಇಡೀ ಊರಿಗೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಹೆಸರಿಡದೆ ಹಲವರು ಕಾಯುತ್ತಿದ್ದಾರೆಂದು ಗ್ರಾಮದ ಬೊಂಬಮ್ಮ ಹೇಳಿದರು.
ಈ ಬಗ್ಗೆ ಶೀಘ್ರ ಕ್ರಮಕೊಳ್ಳುವುದಾಗಿ ಸಚಿವರ ಭರವಸೆ : ಈಗಾಗಲೇ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅರ್ಚಕರೊಬ್ಬರನ್ನು ನೇಮಿಸಿ ಶೀಘ್ರವೇ ಪೂಜೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.