ಗುಂಡ್ಲುಪೇಟೆ(ಚಾಮರಾಜನಗರ): ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟಸ್ವಾಮಿ ಹೇಳಿದರು.
ಪಾಲಕರು ಬಾಲ್ಯ ವಿವಾಹಕ್ಕೆ ಆಸ್ಪದ ನೀಡದೆ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಕಾನೂನಿನ ಪ್ರಕಾರ ವಯೋಮಿತಿ ಹೊಂದಿದವರು ಮಾತ್ರ ವಿವಾಹ ಮಾಡಿಕೊಳ್ಳಬೇಕು. ಮಕ್ಕಳ ಜನನದ ನಡುವೆ ಅಂತರ ಕಾಯ್ದುಕೊಳ್ಳಬೇಕು. ಚಿಕ್ಕ ಕುಟುಂಬಕ್ಕೆ ಆದ್ಯತೆ ನೀಡಬೇಕು. ಇದರಿಂದ ವೈಯಕ್ತಿಕವಾಗಿ ಅನುಕೂಲವಾಗುವುದರ ಜೊತೆಗೆ ದೇಶದ ಜನಸಂಖ್ಯೆ ನಿಯಂತ್ರಣವಾಗುತ್ತದೆ ಎಂದರು.
ಜನಸಂಖ್ಯೆ ಹೆಚ್ಚಳದಿಂದ ಮೂಲ ಸೌಕರ್ಯದ ಕೊರತೆ ಉಂಟಾಗಿ ಜೀವನ ಮಟ್ಟ ಕುಸಿಯುತ್ತದೆ. ಸಮಾಜದಲ್ಲಿ ಗಂಡು ಮಗುವಿನ ವ್ಯಾಮೋಹ ಹೆಚ್ಚಿದ್ದು, ಇದರಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದೆ ಎಂದರು.
ದೇಶದ ಅಭಿವೃದ್ಧಿಗಾಗಿ ಜನಸಂಖ್ಯೆ ನಿಯಂತ್ರಿಸಲೇಬೇಕು. ಇತ್ತೀಚಿನ ವರ್ಷಗಳಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಮ್ಮೆಟ್ಟಿಸುವತ್ತ ದಾಪುಗಾಲಿಡುತ್ತಿದೆ. ಜನಸಂಖ್ಯೆ ನಿಯಂತ್ರಣಕ್ಕಾಗಿರುವ ಯೋಜನೆಗಳನ್ನು ಎಲ್ಲರೂ ಪಾಲಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದ ಅವರು, ಜನಸಂಖ್ಯೆ ನಿಯಂತ್ರಣಕ್ಕಿರುವ ಕ್ರಮಗಳನ್ನು ತಿಳಿಸಿದರು.