ಚಾಮರಾಜನಗರ : ಎಸ್ಎಸ್ಎಲ್ಸಿ ಹಾಗೂ ಇನ್ನಿತರೇ ಪರೀಕ್ಷೆಗಳನ್ನು ಸರ್ಕಾರ ಮಾಡಲೇಬೇಕೆಂದಾದ್ರೆ ಪ್ರತಿಯೊಬ್ಬ ವಿದ್ಯಾರ್ಥಿ ಹೆಸರಲ್ಲಿ 50 ಲಕ್ಷ ರೂ. ಹಾಗೂ ಶಿಕ್ಷಕರ ಹೆಸರಿನಲ್ಲಿ 25 ಲಕ್ಷ ರೂ. ಹಣ ಡೆಪಾಸಿಟ್ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಇಂದು ಜಿಲ್ಲಾಡಳಿತ ಭವನದ ಮುಂಭಾಗ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದರ ವಿರುದ್ಧ ಕೆಲ ಹೊತ್ತು ಪ್ರತಿಭಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ಜೊತೆ ಸರಸ ಸರಿಯಲ್ಲ. ಶಿಕ್ಷಣ ಸಚಿವ ಸುರೇಶ್‌ಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಎಲ್ಲರನ್ನೂ ಉತ್ತೀರ್ಣಗೊಳಿಸಬೇಕು. ಪರೀಕ್ಷೆ-ಪಾಸ್ ಆಗುವುದಕ್ಕಿಂತ ಜೀವವೇ ಮುಖ್ಯ ಎಂದರು.
ಶಾಲಾ ಶುಲ್ಕದ ಹೊಣೆಯನ್ನು ಸರ್ಕಾರವೇ ಹೊರಬೇಕು. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಮುಖಂಡರು ನಡೆಸುವ ಶಾಲೆಗಳಲ್ಲಿ ಶುಲ್ಕ ವಸೂಲಿ ಮೊದಲು ನಿಲ್ಲಿಸಬೇಕು. ಪಾಲಕರಿಂದ ಯಾವುದೇ ರೀತಿ ಶುಲ್ಕ ಪಡೆಯಬಾರದೆಂದು ಒತ್ತಾಯಿಸಿ ನಾಳೆ ವಿಧಾನಸೌಧದ ಎದುರು ಏಕಾಂಗಿಯಾಗಿ ಮಲಗಿ ಪ್ರತಿಭಟಿಸುತ್ತೇನೆ ಎಂದರು.